(ಚಿತ್ರ ಕೃಪೆ: X/@DKShivakumar)
ಬೆಂಗಳೂರು: ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಇನ್ನು ಮುಂದೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದೇ ಕರೆಯಲಾಗುತ್ತದೆ’ ಎಂದರು.
‘ರಾಮನಗರವು ಜಿಲ್ಲಾ ಕೇಂದ್ರವಾಗಿ ಮುಂದುವರಿಯುತ್ತದೆ. ಜಿಲ್ಲೆ ಹೆಸರನ್ನು ಮಾತ್ರ ಮರುನಾಮಕರಣ ಮಾಡಲಾಗುತ್ತದೆ. ಈ ಹಿಂದೆ ಇದು ಬೆಂಗಳೂರು ಜಿಲ್ಲೆಯಾಗಿತ್ತು. ಆಡಳಿತಾತ್ಮಕ ಕಾರಣಕ್ಕೆ ಬೆಂಗಳೂರು ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.
‘ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರವೇ (ಮೇ 23) ಅಧಿಸೂಚನೆ ಹೊರಡಿಸಲಾಗುವುದು. ಬೆಂಗಳೂರು ಹೆಸರನ್ನಿಡುವುದು ಹೆಮ್ಮೆಯ ಸಂಗತಿ. ಹಿಂದೆ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಅಧ್ಯಕ್ಷನಾಗಿದ್ದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ, ಮಾಗಡಿ ಇವೆಲ್ಲವೂ ಬೆಂಗಳೂರಿನ ಭಾಗವಾಗಿದ್ದವು’ ಎಂದರು.
‘ಜಿಲ್ಲೆಯ ಮರು ನಾಮಕರಣದ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಆದರೆ, ಕೇಂದ್ರಕ್ಕೆ ಮಾಹಿತಿ ನೀಡುವ ಉದ್ದೇಶದಿಂದ ಪ್ರಸ್ತಾವನೆ ಕಳುಹಿಸಿದ್ದೆವು. ಅಲ್ಲಿಂದ ಒಪ್ಪಿಗೆ ಸಿಕ್ಕಿದೆ. ಕೆಲವರು ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಹಿಂದೆ ರಾಮನಗರ ಜಿಲ್ಲೆ ಎಂದು ನಾಮಕರಣ ಮಾಡಿದಾಗ ಕೇಂದ್ರವನ್ನು ಕೇಳಿರಲಿಲ್ಲ. ಇನ್ನು ಮುಂದೆ ಎಲ್ಲಾ ದಾಖಲೆಗಳಲ್ಲೂ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆಯಾಗಲಿದೆ. ನನ್ನನ್ನು ನೀವೆಲ್ಲರೂ ಬೆಂಗಳೂರು ದಕ್ಷಿಣ ಜಿಲ್ಲೆಯವನು ಎಂದೇ ಕರೆಯಬೇಕು’ ಎಂದು ಹೇಳಿದರು.
ರಾಮನಗರಕ್ಕೆ ಅದೇ ಹೆಸರು ಇರಲಿ. ಮೊದಲು ಅಭಿವೃದ್ಧಿ ಮಾಡಲಿ. ಆನಂತರ ಹೆಸರು ಬದಲಾವಣೆ ಬಗ್ಗೆ ಯೋಚಿಸಲಿಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ರಾಮನಗರದ ಹೆಸರು ಬದಲಾವಣೆ ಮಾಡಿದಾಕ್ಷಣ ಅಭಿವೃದ್ಧಿಗೆ ಹೆಚ್ಚು ಹಣ ಹರಿದು ಬರುತ್ತದೆಯೇ? ರಾಜಕೀಯ ಲಾಭಕ್ಕಾಗಿ ಹೆಸರು ಬದಲಾಯಿಸುತ್ತಿದ್ದಾರೆನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.