ADVERTISEMENT

ನಾನೂ ಕೆಂಪೇಗೌಡರ ನೆಲದವನೇ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 20:47 IST
Last Updated 4 ಜನವರಿ 2022, 20:47 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿಯ ಚಿಕ್ಕಕಲ್ಯ ಗ್ರಾಮದಲ್ಲೇ ನನ್ನ ಕಂದಾಯ ದಾಖಲೆಗಳಿವೆ. ರಾಮನಗರ ಜಿಲ್ಲೆಯ ಜೊತೆ ನನಗೆ ಡಿಕೆ ಸಹೋದರರಿಗಿಂತಲೂ ದೀರ್ಘ ಇತಿಹಾಸವಿದೆ’ ಎಂದುಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

‘ರಾಮನಗರಕ್ಕೂ ನನಗೂ ಏನು ಸಂಬಂಧ’ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎನ್ನುವ ನನ್ನ ಪೂರ್ಣ ಹೆಸರನ್ನು ನೆನಪಿಸುತ್ತೇನೆ. ಇಂತಹ ಕನಿಷ್ಠ ಪರಿಜ್ಞಾನವೂ ಇಲ್ಲದ ವ್ಯಕ್ತಿ ಕೆಪಿಸಿಸಿ ಅಧ್ಯಕ್ಷರಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಅವರು ಹೇಳಿದರು.

‘ರಾಮನಗರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧ. ಕಾಂಗ್ರೆಸ್ ನಾಯಕರ ಧಮಕಿ, ದಬ್ಬಾಳಿಕೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೇ ಉತ್ತರ’ ಎಂದರು.

‘ಕಾರ್ಯಕ್ರಮದ ಆರಂಭದಿಂದಲೂ ಡಿ.ಕೆ ಸಹೋದರರ ಹಿಂಬಾಲಕರು ಕೆಣಕಲು ಆರಂಭಿಸಿದ್ದರು. ಬಳಿಕ ಗಲಾಟೆ ಮಾಡಿದರು. ಮುಖ್ಯಮಂತ್ರಿಯವರು ಇದ್ದ ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿವೇಚನೆಯೇ ಇವರಿಗಿಲ್ಲ. ಹೀಗಾಗಿ ಅವರ ಹಿಂಬಾಲಕರು ಸೇರಿ ಗಲಾಟೆ ಮಾಡಿದರು. ಈ ಸಹೋದರರಿಗೆ ಅಭದ್ರತೆ ಕಾಡಿರಬಹುದು. ಅದಕ್ಕೆಂದೇ ಈ ರೀತಿ ಮಾಡಿದ್ದಾರೆ’ ಎಂದರು.

‘ಡಿ.ಕೆ.ಶಿವಕುಮಾರ್ ಅವರಂತ ಭಂಡರಿಗೆ ನೇರವಾಗಿಯೇ ಹೇಳುತ್ತೇನೆ. ನಿಮ್ಮ ಪುಂಡಾಟಿಕೆಯನ್ನು ನಾವು ಸಹಿಸುವುದಿಲ್ಲ. ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಹೇಳಿಕೊಂಡಿದ್ದೇವೆ. ನಿಮ್ಮನ್ನು ಕೇಳಿ ಮಾತನಾಡುವ ಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.