ADVERTISEMENT

ರಮೇಶ್‌ ಜಾರಕಿಹೊಳಿ ವಿರುದ್ಧ ದೂರು; ರಾಜೀನಾಮೆ ಕೊಡುವುದಿಲ್ಲ ಎಂದ ಸಚಿವ

ಕೆಲಸದ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 20:53 IST
Last Updated 2 ಮಾರ್ಚ್ 2021, 20:53 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ಸಲ್ಲಿಕೆಯಾಗಿದೆ.

ಸಂತ್ರಸ್ತ ಯುವತಿಯ ಪರವಾಗಿ ದೂರು ಸಲ್ಲಿಸಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ, ಸಚಿವರು ಯುವತಿಯ ಜತೆಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿಗಳನ್ನು ಸಲ್ಲಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಸಚಿವರದ್ದು ಎನ್ನಲಾದ ವಿಡಿಯೊ, ಆಡಿಯೊತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಮೇಶ್‌ ಜಾರಕಿಹೊಳಿ, ಆರೋಪ ಹೊರಬೀಳುತ್ತಿದ್ದಂತೆ ಅಜ್ಞಾತವಾಗಿದ್ದರು. ರಾತ್ರಿ ಬೆಂಗಳೂರಿಗೆ ಮರಳಿದ್ದಾರೆ.

ADVERTISEMENT

‘ಉತ್ತರ ಕರ್ನಾಟಕ ಮೂಲದ ಬಡ ಕುಟುಂಬದ ಯುವತಿಯೊಬ್ಬರು ಕಿರುಚಿತ್ರವೊಂದರ ನಿರ್ಮಾಣಕ್ಕೆ ನೆರವು ಕೋರಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಮಾಡಿದ್ದರು. ನಿನಗೆ ಕೆ‍ಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಕಾಮತೃಷೆಗಾಗಿ ಬಳಸಿಕೊಂಡಿದ್ದು, ವಂಚಿಸಿದ್ದಾರೆ’ ಎಂದು ದಿನೇಶ್‌ ಕಲ್ಲಹಳ್ಳಿ ದೂರಿನಲ್ಲಿ ಆರೋಪಿಸಿದ್ದಾರೆ.

‘ಸಚಿವರ ಜತೆಗಿರುವುದನ್ನು ಸಂತ್ರಸ್ತ ಯುವತಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರು ಯುವತಿಯ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದರು. ಬಳಿಕ ನನ್ನನ್ನು ಸಂಪರ್ಕಿಸಿದ ಯುವತಿಯ ಕುಟುಂಬದವರು, ವಿಡಿಯೊ ಮತ್ತು ಆಡಿಯೊ ಸಿ.ಡಿಗಳನ್ನು ನೀಡಿದ್ದರು. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ, ಸಚಿವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಸಂತ್ರಸ್ತ ಯುವತಿ ರಕ್ಷಣೆಗೆ ಮುಂದಾಗಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ದಿನೇಶ್‌ ಕಲ್ಲಹಳ್ಳಿ ಅವರು ವಿಡಿಯೊ, ಆಡಿಯೊ ತುಣುಕುಗಳು ಮತ್ತು ದೂರಿನ ಪ್ರತಿಯೊಂದಿಗೆ ಮಂಗಳವಾರ ಸಂಜೆ ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಹೋಗಿದ್ದರು. ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ನೇರವಾಗಿ ದೂರು ಸಲ್ಲಿಸಲು ಯತ್ನಿಸಿದರು. ಆದರೆ, ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕಮಿಷನರ್‌ ಸೂಚಿಸಿದರು. ಬಳಿಕ ಅಲ್ಲಿಗೆ ಬಂದ ದಿನೇಶ್‌, ಸಚಿವರ ವಿರುದ್ಧ ದೂರು ನೀಡಿದರು.

ದಿನೇಶ್‌ ಅವರಿಂದ ದೂರು ಸ್ವೀಕರಿಸಿದ ಕಬ್ಬನ್ ಪಾರ್ಕ್‌ ಠಾಣೆ ಪೊಲೀಸರು, ದಿನೇಶ್‌ ಅವರ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡರು. ಸಚಿವರು ಮತ್ತು ಯುವತಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ ಸಿ.ಡಿಗಳು ಹೇಗೆ ಲಭ್ಯವಾದವು? ಯಾರು ತಲುಪಿಸಿದರು? ಸಂತ್ರಸ್ತರ ಬದಲು ದೂರು ನೀಡಲು ಬಂದಿದ್ದೇಕೆ? ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ.

‘ಸಂತ್ರಸ್ತೆ ಹೇಳಿಕೆ ನಂತರ ಕ್ರಮ: ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್‌, ‘ದಿನೇಶ್ ಎಂಬುವವರು ಠಾಣೆಗೆ ಬಂದು ಒಂದು ದೂರು ನೀಡಿದ್ದಾರೆ. ತನಿಖೆ ಆರಂಭಿಸಲಾಗಿದ್ದು, ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಸಚಿವರು ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತೆ ಹಾಗೂ ಅವರ ಕುಟುಂಬದವರು ತಮಗೆ ತಿಳಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಸಂತ್ರಸ್ತೆ ಮತ್ತು ಅವರ ಕುಟುಂಬದವರಿಂದ ಹೆಚ್ಚಿನ ವಿವರ ಪಡೆಯಬೇಕಿದೆ. ನಾವೇ ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು ಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.

ಸಚಿವರೊಂದಿಗೆ ಸಿಎಂ ಸಭೆ:ರಮೇಶ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರುಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಪ್ರಮುಖ ಸಚಿವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚಿಸಿದರು. ಬುಧವಾರ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು,ಈ ವಿಷಯ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಹೈಕಮಾಂಡ್‌ ತಲುಪಿದ ಆರೋಪ:ಸಚಿವ ರಮೇಶ ಜಾರಕಿಹೊಳಿ ವಿರುದ್ಧದ ಆರೋಪ ಬಿಜೆಪಿ ವರಿಷ್ಠರನ್ನೂ ತಲುಪಿದೆ. ಯಡಿಯೂರಪ್ಪ ಅವರ ಸಂಪುಟದ ಸದಸ್ಯರೊಬ್ಬರು ಜಲ ಸಂಪನ್ಮೂಲ ಸಚಿವರಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ ಸಿ.ಡಿಗಳನ್ನು ವರಿಷ್ಠರಿಗೆ ತಲುಪಿಸಿದ್ದಾರೆ ಎಂಬ ಸುದ್ದಿ ಪಕ್ಷದ ವಲಯದಲ್ಲಿ ದಟ್ಟವಾಗಿದೆ.

ಪ್ರಕರಣದ ಕುರಿತು ಹುಬ್ಬಳ್ಳಿಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ರಮೇಶ್‌ ಜಾರಕಿಹೊಳಿ ವಿರುದ್ಧ ಆರೋಪ ಕೇಳಿಬಂದಿರುವುದು ವರಿಷ್ಠರ ಗಮನಕ್ಕೂ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಿ, ಸೂಕ್ತ ತೀರ್ಮಾನಕ್ಕೆ ಬರುತ್ತಾರೆ’ ಎಂದರು.

ಹಾಲಪ್ಪ, ಮೇಟಿ ಪ್ರಕರಣಗಳ ನೆನಪು:2010ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ವಿರುದ್ಧ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ತಕ್ಷಣವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯವು ಅವರನ್ನು ಆರೋಪದಿಂದ ಮುಕ್ತಗೊಳಿಸಿದೆ.

2016 ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್‌.ವೈ. ಮೇಟಿ ಅವರ ವಿರುದ್ಧವೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಆಗಲೂ, ಅವರಿಂದ ರಾಜೀನಾಮೆ ಪಡೆಯಲಾಗಿತ್ತು.

ಸಿದ್ದರಾಮಯ್ಯ ನಿವಾಸದಲ್ಲೂ ಸಭೆ:ರಮೇಶ ಜಾರಕಿಹೊಳಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲೂ ಮಂಗಳವಾರ ರಾತ್ರಿ ತುರ್ತು ಸಭೆ ನಡೆಸಿ, ಚರ್ಚಿಸಲಾಗಿದೆ. ಸಿದ್ದರಾಮಯ್ಯ ನಿವಾಸಕ್ಕೆ ದೌಡಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಜಾರಕಿಹೊಳಿ ಪ್ರಕರಣದ ಕುರಿತು ಚರ್ಚಿಸಿದರು. ಶಾಸಕ ಜಮೀರ್‌ ಅಹಮ್ಮದ್ ಖಾನ್‌, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್ ಕೂಡ ಇದ್ದರು.

ಸಚಿವರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ:‘ಕೆಲಸದ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ರಮೇಶ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಸೇರಿದ್ದ ಕಾರ್ಯಕರ್ತರು, ರಮೇಶ ಜಾರಕಿಹೊಳಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

‘ಅಮಾಯಕ ಹೆಣ್ಣು ಮಕ್ಕಳ ಜೀವನ ಹಾಳು ಮಾಡುತ್ತಿರುವ ಇಂಥವರೇ ಬಿಜೆಪಿ ಪಕ್ಷದಲ್ಲಿ ಹೆಚ್ಚಿದ್ದಾರೆ. ಈ ಬಗ್ಗೆ ನಾಯಕರು ಕೂಡಲೇ ಮಾತನಾಡಬೇಕು. ಜಾರಕಿಹೊಳಿ ಅವರನ್ನು ವಜಾ ಮಾಡದಿದ್ದರೆ, ಮುಖ್ಯಮಂತ್ರಿ ಕಚೇರಿ ಎದುರು ಧರಣಿ ಆರಂಭಿಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

‘ರಾಜೀನಾಮೆ ಕೊಡುವುದಿಲ್ಲ’:‘ನಾನು ಯಾವುದೇ ತಪ್ಪು ಮಾಡಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಸಮಗ್ರ ತನಿಖೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ’ ಎಂದು ಸಚಿವ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಬುಧವಾರವೇ ದೆಹಲಿಗೆ ಹೋಗುತ್ತೇನೆ. ವಿಡಿಯೊದಲ್ಲಿರುವುದು ನಾನಲ್ಲ. ವಿಡಿಯೊವನ್ನು ಎಡಿಟ್‌ ಮಾಡಿ ನನ್ನ ಮುಖವನ್ನು ಸೇರಿಸಿದ್ದಾರೆ. ಎಲ್ಲವನ್ನೂ ವರಿಷ್ಠರಿಗೆ ಮನವರಿಕೆ ಮಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.