ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣ ಸಂಬಂಧ ಬುಧವಾರ ಬಿಜೆಪಿ– ಕಾಂಗ್ರೆಸ್ ನಡುವೆ ಮತ್ತೆ ಟ್ವೀಟ್ ವಾರ್ ಮುಂದುವರಿದಿದೆ.
‘ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ‘ಮಾಸ್ಟರ್ ಮೈಂಡ್ʼ’ ಮತ್ತು ‘ರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ‘ನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದೆ.
ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್, ‘ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿ ಸರ್ಕಾರ ದೇಶದ್ರೋಹಿ ಮತ್ತು ಅತ್ಯಾಚಾರಿಯೊಂದಿಗೆ ಪ್ರಧಾನಿ ಮೋದಿಯವರಿಗೆ ಏನು ಸಂಬಂಧ?, ಸಂಸದ ತೇಜಸ್ವಿ ಸೂರ್ಯ ಅವರಿಗೆ ಡ್ರಗ್ ಡೀಲರ್‌ಗೂ ಏನು ಸಂಬಂಧ?, ಪ್ರತಾಪ್ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ?, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು?’ ಎಂದು ತಿರುಗೇಟು ನೀಡಿದೆ.
ಇದೇ ವಿಚಾರವಾಗಿ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ‘ಆ ಪ್ರಕರಣದ ‘ಮಾಸ್ಟರ್ ಮೈಂಡ್‌ಗಳೆಲ್ಲರೂʼ ಮಹಾ ನಾಯಕನೊಂದಿಗೆ ಏಕೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ರಾಜ್ಯದ ಜನತೆಯನ್ನು ಕಾಡುತ್ತಿದೆ. ಈ ಸಂಬಂಧ ಏಕೆ, ಹೇಗೆ ಮತ್ತು ಯಾಕಾಗಿ ಇತ್ತು ಎಂಬುದನ್ನು ‘ರಿಂಗ್ ಮಾಸ್ಟರ್ʼ ಬಗೆಹರಿಸುವರೇ!? ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಇರುವ ಸಂಬಂಧವೇನು? ಎಂದು ಪ್ರಶ್ನಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ‘4 ತಿಂಗಳಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದರೂ ದೂರು ನೀಡಿರಲಿಲ್ಲವೇಕೆ?, ₹20 ಕೋಟಿ ಬಜೆಟ್ಟಿನ ಸಿಡಿಗೆ ಕೇವಲ 5 ಕೋಟಿ ಬೇಡಿಕೆಯೇ?, ತಪ್ಪು ಮಾಡಿಲ್ಲ, ವಿಡಿಯೊ ನಕಲಿ ಎಂದರೆ ಹಣ ಸಂದಾಯ ಮಾಡಿದ್ದೇಕೆ?, ಮಾಡಬಾರದ್ದನ್ನು ಮಾಡಿ ಅಂಜಿ ಕುಳಿತಿದ್ದಿರಿ ಅಲ್ಲವೇ ಜಾರಕಿಹೊಳಿಯವರೇ? ಎಂದು ಪ್ರಶ್ನಿಸಿದೆ.
‘ರಮೇಶ ಜಾರಕಿಹೊಳಿ ಅವರಿಂದ ಶೋಷಣೆಗೆ ಒಳಪಟ್ಟ ಯುವತಿ ರಕ್ಷಣೆಗೆ ಅಂಗಲಾಚಿದ್ದಾಳೆ. ಪೋಷಕರು ಯುವತಿ ಕಾಣೆಯಾಗಿದ್ದಾಳೆಂದು ದೂರು ಸಲ್ಲಿಸಿದ್ದಾರೆ.ಹೆಣ್ಣಿನ ದುರ್ಬಳಕೆ ಹಾಗೂ ಶೋಷಣೆಯಾಗಿರುವ ಆಯಾಮದಲ್ಲಿ ತನಿಖೆ ನಡೆಸದಿರುವ ಬಿಜೆಪಿ ಸರ್ಕಾರ ತನ್ನ ಮಹಿಳಾ ವಿರೋಧಿ ಧೋರಣೆಯನ್ನು ಸಾಬೀತು ಮಾಡಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.