ರಮ್ಯಾ
ಬೆಂಗಳೂರು: ನಟಿ ರಮ್ಯಾ ಅವರಿಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಟಿ.ಓಬಣ್ಣ (25) ಹಾಗೂ ಗಂಗಾಧರ ಬಂಧಿತರು.
ಬಂಧಿತರಾದ ಓಬಣ್ಣ ‘ರಾಬರ್ಟ್ ರಾಘವ 5‘ಡಿ’ ಬಾಸ್ ಟಿಜೆ’ ಹಾಗೂ ಗಂಗಾಧರ, ‘ದರ್ಶನ್ ತೂಗುದೀಪ್’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಗಳಿಂದ ರಮ್ಯಾ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ 13 ಜನರನ್ನು ಗುರುತಿಸಲಾಗಿದೆ. ಆ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ 11 ಮಂದಿಯನ್ನು ಬಂಧಿಸಬೇಕಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಸುಮಾರು 50 ಖಾತೆಗಳ ಬಳಕೆದಾರರನ್ನು ಪತ್ತೆ ಹಚ್ಚಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ನಗರದ ಹೊರವಲಯದಲ್ಲಿನ ಕೆಲವು ವ್ಯಕ್ತಿಗಳ ಖಾತೆಗಳಿಂದಲೂ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದರು.
ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ಅವರು ಜುಲೈ 28ರಂದು ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಸೆಕ್ಷನ್‌ಗಳಾದ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ), 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದ ಅಡಿ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.