ರಮ್ಯಾ
ಬೆಂಗಳೂರು: ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸಿಸಿಬಿಗೆ ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದರು.
ಜಂಟಿ ಪೊಲೀಸ್ ಕಮಿಷನರ್ ಮೇಲ್ವಿಚಾರಣೆಯಲ್ಲಿ ಎಸಿಪಿ ದರ್ಜೆಯ ಅಧಿಕಾರಿಯನ್ನು ತನಿಖೆಗೆ ನೇಮಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಹಾಕಿದ್ದ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಅವರು ಹೇಳಿದರು.
ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾದ ಪ್ರಕರಣದ ಕಡತವನ್ನು ಪಡೆದುಕೊಂಡಿರುವ ಸಿಸಿಬಿ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ರಮ್ಯಾ ಅವರನ್ನು ಮಂಗಳವಾರ ಭೇಟಿ ಮಾಡಿದ ಸಿಸಿಬಿ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕಲೆಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವರ ವಿರುದ್ಧ ಎಫ್‌ಐಆರ್:
ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಮ್ಯಾ ಅವರು ಸೀಮಂತ್ ಕುಮಾರ್ ಸಿಂಗ್ ಅವರನ್ನು ಸೋಮವಾರ ಭೇಟಿ ಮಾಡಿ ನಾಲ್ಕು ಪುಟಗಳ ದೂರು ನೀಡಿದ್ದರು. ದೂರಿನ ಪ್ರತಿಯನ್ನು ಪೊಲೀಸ್ ಕಮಿಷನರ್ ಅವರು ಸೈಬರ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆಗೆ ಆದೇಶಿಸಿದ್ದರು.
ಪ್ರಮೋದ್‌ಗೌಡ, ಡಿ ಬಾಸ್ ಗಂಗಾ, ಆಕಾಶ್, ದೊಣ್ಣೂರು ನಾಗರಾಜ್, ರಾಜು, ಅಪ್ಪು ಬಡಿಗೇರ್, ಡೆವಿಲ್ ಲವ್ವರ್, ಆಕಾಶ್, ಹರೀಶಣ್ಣ, ಹೇಮಂತ್, ಸುಜನ್, ಚಿನ್ಮಯ್, ವಿನು ಸೇರಿದಂತೆ 43 ಖಾತೆಗಳ ವಿರುದ್ಧ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಸೆಕ್ಷನ್‌ಗಳಾದ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ), 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದ ಅಡಿ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಕಳೆದ ವಾರ ಛೀಮಾರಿ ಹಾಕಿತ್ತು. ಜಾಮೀನಿನ ಮೇಲಿನ ಆದೇಶವನ್ನು ಕಾಯ್ದಿರಿಸಿತ್ತು.
ಇದರ ಬೆನ್ನಲ್ಲೇ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ರಮ್ಯಾ, ‘ಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಕಿರಣ ಇದ್ದಂತೆ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ’ ಎಂದು ಅದರಲ್ಲಿ ಉಲ್ಲೇಖಿಸಿದ್ದರು. ಈ ಪೋಸ್ಟ್ ಬಳಿಕ ರಮ್ಯಾ ಅವರ ಇನ್‌ಸ್ಟಾಗ್ರಾಂ ಖಾತೆಗಳಿಗೆ ಅವಹೇಳನಕಾರಿ ಸಂದೇಶಗಳು ಬಂದಿದ್ದವು. ಸಂದೇಶಗಳ ಸ್ಕ್ರೀನ್‌ಶಾಟ್ ಅನ್ನು ರಮ್ಯಾ ತೆಗೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.