ADVERTISEMENT

ಬೆಳಗಾವಿ | 30 ಕೃಷ್ಣಮೃಗಗಳ ಸಾವು; ಬೆಂಕಿಯಲ್ಲಿ ಬೆಂದ ತುಂಟ ಕಂಗಳ ವನಗೂಸುಗಳು!

ಸಂತೋಷ ಈ.ಚಿನಗುಡಿ
Published 17 ನವೆಂಬರ್ 2025, 2:03 IST
Last Updated 17 ನವೆಂಬರ್ 2025, 2:03 IST
<div class="paragraphs"><p>ಬೆಳಗಾವಿಯ ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಕಲರವ </p></div>

ಬೆಳಗಾವಿಯ ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಕಲರವ

   

(ಸಂಗ್ರಹ ಚಿತ್ರ)

ಬೆಳಗಾವಿ: ಇಲ್ಲಿನ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 30 ಕೃಷ್ಣಮೃಗಗಳು ಉಸಿರು ಚೆಲ್ಲಿವೆ. ಎಲ್ಲರೂ ಸಾವಿಗೆ ಕಾರಣ ಹುಡುಕುತ್ತಿದ್ದಾರೆ ಹೊರತು; ಹೊಣೆ ಯಾರು ಎಂದು ನಿರ್ಧರಿಸಲು ಆಗಿಲ್ಲ. ಇದರ ಮಧ್ಯೆಯೇ ಮೃಗಾಲಯದ ಆರೋಗ್ಯ ಸಲಹಾ ಸಮಿತಿ ಕ್ರಿಯಾಶೀಲವಾಗಿಲ್ಲ ಎಂಬ ತಕರಾರನ್ನು ಪರಿಸರವಾದಿಗಳು ಮುಂದಿಟ್ಟಿದ್ದಾರೆ.

ADVERTISEMENT

ಎರಡು ದಿನಗಳ ಹಿಂದಷ್ಟೇ ತುಂಟ ಕಣ್ಣುಗಳನ್ನು ಪಿಳಕಿಸುತ್ತ, ಉದ್ದ ಕೊಂಬು ಬೀಸುತ್ತ, ಚೆಲ್ಲಾಟವಾಡುತ್ತಿದ್ದ ಮುದ್ದು ಮುಖದ ವನಗೂಸುಗಳು ಬೆಂಕಿಯಲ್ಲಿ ಉರಿದುಹೋಗಿವೆ. ಜನರಂಜನೆಗೆ, ಮನರಂಜನೆಗೆ ಅರ್ಪಿಸಿಕೊಂಡಿದ್ದ ಈ ತುಂಟ ಜೀವಗಳ ಸಾಮೂಹಿಕ ಸಾವು ದಿಗಿಲುಗೊಳಿಸಿದೆ.

‘ಹೆಮೊರೈಸಿಕ್‌ ಸೆಪ್ಟಿಸಿಮಿಯಾ (HS– ರಕ್ತಸ್ರಾವ ರೋಗ) ಎಂಬ ರೋಗದಿಂದ ಕೃಷ್ಣಮೃಗಗಳು ಸತ್ತ ಅಂದಾಜಿದೆ. ಇದು ಅತ್ಯಂತ ಗಂಭೀರ ಪರಿಣಾಮ ಬೀರುವ ಬ್ಯಾಕ್ಟೀರಿಯಾ. ರೋಗ ತಗಲಿದ 24 ಗಂಟೆಗಳಲ್ಲೇ ಪ್ರಾಣಿಗಳು ಜೀವ ಚೆಲ್ಲುತ್ತವೆ. ಸದ್ಯ ಕೃಷ್ಣಮೃಗಗಳ ಸಾವಿನ ರೀತಿ ಇದಕ್ಕೆ ಹೋಲಿಕೆ ಆಗುತ್ತಿದೆ. ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ಜೈವಿಕ ಸಂಶೋಧನಾ ಸಂಸ್ಥೆ (ಇನ್‌ಸ್ಟಿಟ್ಯೂಟ್‌ ಆಫ್‌ ವೆಟರ್ನರಿ ಬಯಾಲಾಜಿಕಲ್ಸ್‌)ಗೆ ಕಳಿಸಲಾಗಿದೆ. ಬಳಕವೇ ನಿಖರ ಕಾರಣ ಗೊತ್ತಾಗಲಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಬ್ಯಾಕ್ಟೀರಿಯಾ ಹುಟ್ಟಲು ಕಾರಣವೇನು?:  ರಾಜ್ಯದ ಯಾವುದೇ ಮೃಗಾಲಯದಲ್ಲಿ ಕಾಣಿಸಿಕೊಳ್ಳದ ಮಾರಣಾಂತಿಕ ಬ್ಯಾಕ್ಟೀರಿಯಾ ಇಲ್ಲಿ ಏಕೆ ಕಾಣಿಸಿಕೊಂಡಿದೆ ಎಂಬ ಪ್ರಶ್ನೆಯನ್ನೂ ಪರಿಸರವಾದಿಗಳು ಎತ್ತಿದ್ದಾರೆ. ಏಕಾಏಕಿ ತಾಪಮಾನದ ಕುಸಿತ, ಹವಾಮಾನದಲ್ಲಿ ವಿಷಮ ಬದಲಾವಣೆಯ ಕಾರಣ ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ಇಂಥ ಬ್ಯಾಕ್ಟೀರಿಯಾ ದಾಳಿ ಮಾಡುತ್ತವೆ ಎಂಬ ಉತ್ತರವನ್ನು ಸೂಕ್ಷ್ಮಜೀವಿ ತಜ್ಞರು ಕೊಟ್ಟಿದ್ದಾರೆ.

ಸಮಿತಿ ಏನು ಮಾಡುತ್ತಿದೆ?: ಕೇಂದ್ರ ಮೃಗಾಲಯ ಪ್ರಾಧಿಕಾರ ಹೊರಡಿಸಿದ ‘ಭಾರತದಲ್ಲಿ ಮೃಗಾಲಯಗಳ ಸ್ಥಾಪನೆ ಮತ್ತು ವೈಜ್ಞಾನಿಕ ನಿರ್ವಹಣೆ (2019)’ಯ ಮಾರ್ಗಸೂಚಿಗಳ ಪ್ರಕಾರ ಆರೋಗ್ಯ ಸಲಹಾ ಸಮಿತಿ ರಚನೆ ಮಾಡುವುದು ಕಡ್ಡಾಯ. ಮೃಗಾಲಯದ ಸ್ಥಿತಿಗತಿ, ಪ್ರಾಣಿಗಳ ಆರೋಗ್ಯ, ಹವಾಮಾನ ವೈಪರೀತ್ಯ, ಆಹಾರ, ಚುಚ್ಚುಮದ್ದು ಆದಿಯಾಗಿ ಪ್ರತಿಯೊಂದರಲ್ಲೂ ಈ ಸಮಿತಿ ನಿರ್ದೇಶನ ನೀಡಬೇಕಾದುದು ಅಗತ್ಯ.

ಪೋಷಣೆ ಕೊರತೆ, ಅನಾರೋಗ್ಯ, ಸೋಂಕು, ನಂಜು ಮುಂತಾದ ತುರ್ತು ಸಂದರ್ಭಗಳಲ್ಲಿ ಈ ಸಮಿತಿ ಮುನ್ನೆಲೆಗೆ ಇರಬೇಕು ಎಂಬುದು ನಿಯಮದಲ್ಲಿದೆ. ಆದರೆ, ಭೂತರಾಮನಹಟ್ಟಿ ಮೃಗಾಲಯದಲ್ಲಿ ಇದೂವರೆಗೆ ಇಂಥ ಪ್ರಯತ್ನ ಆಗಿಲ್ಲ ಎಂಬುದು ಪರಿಸರವಾದಿಗಳ ದೂರು.

ಅನುಭವಿ ಪಶುವೈದ್ಯರು, ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು, ವನ್ಯಜೀವಿ ತಜ್ಞರು, ಮೃಗಾಲಯದ ಪಶುವೈದ್ಯರು, ಮೃಗಾಲಯದ ಹಿರಿಯ ಪಶುವೈದ್ಯಾಧಿಕಾರಿ ಹೀಗೆ ತಜ್ಞರೇ ಈ ಸಮಿತಿಯಲ್ಲಿ ಇರುತ್ತಾರೆ. ಇವರು ನೀಡುವ ಎಲ್ಲ ಸಲಹೆಗಳನ್ನೂ ಮೃಗಾಲಯ ಪಾಲಿಸಬೇಕು. ಮೃಗಾಲಯದ ನಿರ್ದೇಶಕರು ಮತ್ತು ಮೇಲ್ವಿಚಾರಕರು (ಪ್ರಾಣಿ) ಆರೋಗ್ಯ ಸಲಹಾ ಸಮಿತಿಯ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದು ಕಾಯ್ದೆಯಲ್ಲಿದೆ.

ಜಿಂಕೆ, ಕಡವೆಗಳ ಆರೋಗ್ಯದ ಮೇಲೆ ನಿಗಾ

ಕಿರು ಮೃಗಾಲಯದಲ್ಲಿ ಜಿಂಕೆ, ಕಡವೆಗೆ ಸೋಂಕು ಹರಡುವ ಅಪಾಯವಿದ್ದು, ಅವುಗಳ ಆರೋಗ್ಯದ ಮೇಲೂ ನಿಗಾ ವಹಿಸ ಲಾಗಿದೆ. ಕೃಷ್ಣಮೃಗ, ಜಿಂಕೆ ಮತ್ತು ಕಡವೆ ಇರುವ ಸ್ಥಳ‌ ಮುಚ್ಚಿ, ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. 

‘ಈ ಮೂರು ಪ್ರಬೇಧಗಳ ಪ್ರಾಣಿಗಳ ಆರೈಕೆಗೆ ಮತ್ತು ಆಹಾರ ನೀಡುವಿಕೆಗೆ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಕೃಷ್ಣಮೃಗ ಆರೈಕೆ ಮಾಡುವ ಸಿಬ್ಬಂದಿ ಉಳಿದ ಪ್ರಾಣಿಗಳು ಇರುವ ಸ್ಥಳದ ಕಡೆ ತೆರಳದಂತೆ ಸೂಚಿಸಿದ್ದೇವೆ. ಬದುಕುಳಿದ 8 ಕೃಷ್ಣಮೃಗಗಳ ಆರೋಗ್ಯ, ಚಲನ–ವಲನದ ಮೇಲೆ ನಾಲ್ವರು ಸಿಬ್ಬಂದಿ ನಿರಂತರವಾಗಿ ನಿಗಾ ಇರಿಸಿದ್ದಾರೆ’ ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಬನ್ನೇರುಘಟ್ಟ ಶಾಖೆ ತಜ್ಞ ಡಾ.ಮಂಜುನಾಥ ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷ್ಣಮೃಗಗಳಿಗೆ ಆಹಾರ ನೀಡುವ ತಟ್ಟೆ, ಅವುಗಳ ಆರೈಕೆಗೆ ಬಳಸುವ ವಸ್ತುಗಳನ್ನು ಜಿಂಕೆ, ಕಡವೆಗಳ ಬಳಿ ಒಯ್ಯದಂತೆ ಸಿಬ್ಬಂದಿಗೆ ತಿಳಿಸಿದ್ದೇವೆ’ ಎಂದರು.

ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ

ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭಾನುವಾರ ಭೇಟಿ ನೀಡಿದ ಬೆಂಗಳೂರಿನ ತಜ್ಞರ ತಂಡದ ಸಮ್ಮುಖದಲ್ಲಿ ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು.  

ಗುರುವಾರ 8, ಶನಿವಾರ ನಸುಕಿನಲ್ಲಿ 20 ಸೇರಿ 28 ಕೃಷ್ಣಮೃಗ ಸಾವನ್ನಪ್ಪಿದ್ದವು. ಸ್ಥಳೀಯ ಪಶುವೈದ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ 25 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಲಾಗಿತ್ತು. ತಜ್ಞರ ನೇತೃತ್ವದಲ್ಲಿ ಪರೀಕ್ಷೆ ನಡೆಸುವುದಕ್ಕಾಗಿ ಮೂರು ಕೃಷ್ಣಮೃಗಗಳ ಕಳೇಬರಗಳನ್ನು ಸಂಗ್ರಹಿಸಿ ಇಡಲಾಗಿತ್ತು.

ಈ ನಡುವೆ ಶನಿವಾರ ತಡರಾತ್ರಿಯೂ ಒಂದು ಕೃಷ್ಣಮೃಗ ಮೃತಪಟ್ಟಿತು. ಇದೂ ಸೇರಿ,  ಸಂಗ್ರಹಿಸಿದ್ದ ಮೂರು ಕಳೇಬರಗಳ ಮರಣೋತ್ತರ ಪರೀಕ್ಷೆಯನ್ನು
ತಜ್ಞರ ಸಮ್ಮುಖದಲ್ಲಿ ಭಾನುವಾರ ನಡೆಸಲಾಯಿತು.

‘ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶದಂತೆ ತನಿಖೆ ನಡೆಸಿದ ನಂತರ ಕೃಷ್ಣಮೃಗಗಳ ಸಾವಿಗೆ
ನಿಖರ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

‘ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್‌ ಒತ್ತಾಯಿಸಿದರು.

ಮತ್ತೊಂದು ಕೃಷ್ಣಮೃಗ ಸಾವು

ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಭಾನುವಾರ ಸಂಜೆ ಮತ್ತೊಂದು ಕೃಷ್ಣಮೃಗ ಮೃತಮೃಟ್ಟಿದ್ದು, ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

‘ಸ್ಥಳೀಯ ಪಶುವೈದ್ಯರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಅದರ ಅಂತ್ಯಕ್ರಿಯೆ ನಡೆಸಿದ್ದೇವೆ’ ಎಂದು ಮೃಗಾಲಯದ ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ‘ಪ್ರಜಾವಾಣಿ’ಗೆ ತಿಳಿಸಿದರು.ಕೃಷ್ಣಮೃಗ

ಮೃಗಾಲಯದಲ್ಲಿ ವಾರಕ್ಕೊಮ್ಮೆ ಪ್ರಾಣಿ– ಪಕ್ಷಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೃಷ್ಣಮೃಗಗಳಿಗೆ ಸೋಂಕು ತಗಲಿದಾಗ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಹೆಚ್ಚು ಅನಾಹುತವಾಗಿದೆ.
– ಕ್ರಾಂತಿಕುಮಾರ್‌, ಡಿಸಿಎಫ್‌ ಬೆಳಗಾವಿ
ದಾಳಿ ನಿರ್ಲಕ್ಷ್ಯ ವಿಷಪ್ರಾಷಣವಾಗಿದ್ದರೆ ನೇರ ಹೊಣೆ ಮಾಡಬಹುದು. ಆದರೆ ಇದು ರೋಗಕ್ಕೆ ಸಂಬಂಧಿಸಿದ ಘಟನೆ. ಪೂರ್ಣ ತನಿಖೆ ಮುಗಿದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
– ಅನೀಲ ಪನ್ವಾರ್‌, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ
ಮೃಗಾಲಯದ ಪ್ರಾಣಿಗಳ ಆವರಣದ ಸ್ವಚ್ಛತೆ ಆಹಾರ ನೀಡುವಿಕೆ ಪ್ರಾಣಿಗಳ ಆರೋಗ್ಯ ಲಸಿಕೆ ನೀಡುವಿಕೆ ಆಡಳಿತ ರಕ್ಷಣೆ ಕುರಿತು ಕಳೆದೆರಡು ವರ್ಷಗಳಲ್ಲಿ ಅಧಿಕಾರಿಗಳು ಎಷ್ಟು ಬಾರಿ ತಪಾಸಣೆ ನಡೆಸಿದ್ದಾರೆ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು.
ರಾಘವೇಂದ್ರ, ಆರ್‌ಟಿಐ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.