
ಬೆಂಗಳೂರು: ‘ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ವಿಮಾನಗಳ ಹಾರಾಟ ರದ್ದಾಗಿರುವ ಕಾರಣ ಬಾಲಿವುಡ್ ನಟ ರಣವೀರ್ ಸಿಂಗ್ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದು, ಭಾರತಕ್ಕೆ ಹಿಂದಿರುಗಲಾಗುತ್ತಿಲ್ಲ’ ಎಂದು ಅವರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
ಕಾಂತಾರ ಚಾಪ್ಟರ್-1 ಚಲನಚಿತ್ರದಲ್ಲಿ, ಚಾಮುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಹಾಸ್ಯ ಮಾಡಿದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ, ‘ನನ್ನ ವಿರುದ್ಧದ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ರಣವೀರ್ ಸಿಂಗ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.ರಣವೀರ್ ಸಿಂಗ್
ಈ ಅರ್ಜಿ ಸೋಮವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಾಗ, ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿಬ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಆಕ್ಷೇಪಣೆ ತಯಾರಿದೆ. ಮುಂದಿನ ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದರು.
‘ವಿಚಾರಣೆಗೆ ಹಾಜರಾಗುವಂತೆ ರಣವೀರ್ ಸಿಂಗ್ ಅವರಿಗೆ ಸೂಚಿಸಿ ಪೊಲೀಸರು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗಲು ರಣವೀರ್ ಸಮಯಾವಕಾಶ ಕೋರುತ್ತಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಯಾಗಿ ರಣವೀರ್ ಸಿಂಗ್ ಪರ ಪದಾಂಕಿತ ಹಿರಿಯ ವಕೀಲ ಸಜನ್ ಪೂವಯ್ಯ, ‘ನೋಟಿಸ್ ಸ್ವೀಕರಿಸಲಾಗಿದೆ. ರಣವೀರ್ ಸಿಂಗ್ ಸದ್ಯ ವಿದೇಶದಲ್ಲಿದ್ದಾರೆ. ಯುದ್ಧದಿಂದ ಮಧ್ಯಪ್ರಾಚ್ಯದ ಯಾವುದೇ ಭಾಗದಿಂದಲೂ ಅದರಲ್ಲೂ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರಬೇಕಿರುವ ಬಹತೇಕ ಎಲ್ಲಾ ವಿಮಾನಗಳ ಹಾರಾಟ ರದ್ದಾಗಿದೆ. ರಣವೀರ್ ಪೊಲೀಸರ ವಿಚಾರಣೆಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು. ಅಲ್ಲಿಯವರೆಗೂ ‘ರಣವೀರ್ ವಿರುದ್ಧ ಪೊಲೀಸರು ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಸೂಚಿಸಿ ಈ ಮೊದಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.