ADVERTISEMENT

ರನ್ಯಾ ರಾವ್ ಪ್ರಕರಣ: 4 ತಿಂಗಳಲ್ಲಿ 49.6 ಕೆ.ಜಿ. ಚಿನ್ನ ಕಳ್ಳಸಾಗಣೆ

ರನ್ಯಾ ರಾವ್ ತಂದಿದ್ದ ಬಂಗಾರವನ್ನು ₹40 ಕೋಟಿಗೆ ಮಾರಿದ್ದ ಸಾಹಿಲ್‌ ಜೈನ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 0:30 IST
Last Updated 4 ಏಪ್ರಿಲ್ 2025, 0:30 IST
<div class="paragraphs"><p>ನಟಿ ರನ್ಯಾ ರಾವ್</p></div>

ನಟಿ ರನ್ಯಾ ರಾವ್

   

ಬೆಂಗಳೂರು: ನಟಿ ರನ್ಯಾ ರಾವ್ ದುಬೈನಿಂದ ಕಳ್ಳಸಾಗಣೆ ಮಾಡಿದ್ದ 49.6 ಕೆ.ಜಿ.ಯಷ್ಟು ಚಿನ್ನವನ್ನು ಚಿನ್ನಾಭರಣ ವ್ಯಾಪಾರಿ ಸಾಹಿಲ್‌ ಸಖಾರಿಯಾ ಜೈನ್‌ ಮಾರಾಟ ಮಾಡಿದ್ದರು ಎಂದು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹೇಳಿದೆ. 

ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್‌ಐ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಚಿನ್ನಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ಚಿನ್ನದ ಮಾರಾಟವನ್ನು ಹೇಗೆ ಮಾಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿದೆ.

ADVERTISEMENT

‘2024ರ ನವೆಂಬರ್‌ನಿಂದ 2025ರ ಫೆಬ್ರುವರಿ ನಡುವೆ ರನ್ಯಾ ನಾಲ್ಕು ಬಾರಿ ಕಳ್ಳಸಾಗಣೆ ಮಾಡಿದ್ದು, ಒಟ್ಟು 49.6 ಕೆ.ಜಿ.ಯಷ್ಟು ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತಂದಿದ್ದಾರೆ. ಅಷ್ಟೂ ಚಿನ್ನವನ್ನು ಸಾಹಿಲ್‌ ₹40.07 ಕೋಟಿಗೆ ಮಾರಾಟ ಮಾಡಿ, ಅದರಲ್ಲಿ ₹38.35 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದಾರೆ. ಉಳಿದ ₹1.72 ಕೋಟಿಯನ್ನು ರನ್ಯಾಗೆ ನೀಡಲಾಗಿದೆ ಎಂಬ ಅಂಶ ಸಾಹಿಲ್‌ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಡಿಆರ್‌ಐ ತಿಳಿಸಿದೆ.

‘2024ರ ನವೆಂಬರ್‌ನಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ 8.9 ಕೆ.ಜಿ. ಚಿನ್ನ ತಂದಿದ್ದು, ಸಾಹಿಲ್‌ ಅದನ್ನು ₹6.82 ಕೋಟಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ ₹6.50 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿ, ಉಳಿದ ₹32 ಲಕ್ಷವನ್ನು ರನ್ಯಾಗೆ ನೀಡಿದ್ದಾರೆ. ಡಿಸೆಂಬರ್‌ನಲ್ಲಿ12.6 ಕೆ.ಜಿ. ಚಿನ್ನ ತಂದು, ಅದನ್ನು ₹9.90 ಕೋಟಿಗೆ ಮಾರಲಾಗಿದೆ. ಅದರಲ್ಲಿ ₹9.60 ಕೋಟಿ ದುಬೈಗೆ ಹೋಗಿದ್ದರೆ, ₹30 ಲಕ್ಷ ರನ್ಯಾಗೆ ಪಾವತಿಯಾಗಿದೆ’ ಎಂದು ವಿವರಿಸಿದೆ.

‘2025ರ ಜನವರಿಯಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ ತಂದಿದ್ದ 14.5 ಕೆ.ಜಿ. ಬಂಗಾರವನ್ನು, ₹11.55 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಲ್ಲಿ ₹55 ಲಕ್ಷವನ್ನು ರನ್ಯಾಗೆ ನೀಡಿ, ₹11 ಕೋಟಿಯನ್ನು ದುಬೈಗೆ ಕಳುಹಿಸಲಾಗಿದೆ. ಫೆಬ್ರುವರಿಯಲ್ಲೂ ಹೀಗೆಯೇ 13.4 ಕೆ.ಜಿ. ಚಿನ್ನವನ್ನು ₹11.80 ಕೋಟಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ ₹11.25 ಕೋಟಿಯನ್ನು ದುಬೈಗೆ ಕಳುಹಿಸಿದ್ದು, ₹55 ಲಕ್ಷ ರನ್ಯಾಗೆ ಹೋಗಿದೆ’ ಎಂದು ಡಿಆರ್‌ಐ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.