ADVERTISEMENT

ಅತ್ಯಾಚಾರ ಆರೋಪಿಗೆ ಪರೀಕ್ಷೆ ಬರೆಯಲು ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 15:51 IST
Last Updated 8 ಮಾರ್ಚ್ 2022, 15:51 IST

ಬೆಂಗಳೂರು:ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜೈಲು ಸೇರಿರುವ ಬಿ.ಕಾಂ. ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಇದೇ 15ರಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಹೈಕೋರ್ಟ್‌ ಷರತ್ತುಬದ್ಧ ಅವಕಾಶ ಕಲ್ಪಿಸಿದೆ.

‘ನನಗೆ ಪರೀಕ್ಷೆ ಬರೆಯಲು ಅನುವಾಗುವಂತೆ ಜಾಮೀನು ನೀಡಬೇಕು‘ ಎಂದು ಕೋರಿ ವಿಚಾರಣಾಧೀನ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ‘ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ಆರೋಪಿಯ ಭವಿಷ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದೆ.

ಷರತ್ತುಗಳು: ‘ಅರ್ಜಿದಾರ ವಿದ್ಯಾರ್ಥಿಯು, ಪರೀಕ್ಷಾ ವೇಳಾಪಟ್ಟಿ ನಿಗದಿಯಾದ ದಿನದಂದು ರಾಜಾಜಿನಗರದ ವಿವೇಕಾನಂದ ಕಾಲೇಜಿನಲ್ಲಿ ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು/ಮುಖ್ಯ ಪರಿವೀಕ್ಷಕರು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಆರೋಪಿಯನ್ನು ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಜೈಲಿನಿಂದಲೇ ಪರೀಕ್ಷಾ ಕೇಂದ್ರಕ್ಕೆ ತರಬೇಕು. ಪರೀಕ್ಷೆ ಮುಗಿದ ನಂತರ ಜೈಲಿಗೆ ವಾಪಸು ಕರೆದೊಯ್ಯಬೇಕು. ಆರೋಪಿಯ ಖರ್ಚಿನಲ್ಲಿಯೇ ಜೈಲು ಅಧಿಕಾರಿಗಳು ಭದ್ರತಾ ಸಿಬ್ಬಂದಿ ನಿಯೋಜಿಸಬೇಕು‘ ಎಂಬ ಷರತ್ತು ವಿಧಿಸಲಾಗಿದೆ.

ADVERTISEMENT

ಅಂತೆಯೇ, ‘ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮತ್ತು ಜೈಲಿಗೆ ಹಿಂದಿರುಗುವಾಗ ಆರೋಪಿಯ ಕೈಗಳಿಗೆ ಬೇಡಿ ತೊಡಿಸಬಾರದು. ಆರೋಪಿಯ ಘನತೆ ಮತ್ತು ಗೋಪ್ಯತೆ ಕಾಪಾಡುವ ದೃಷ್ಟಿಯಿಂದ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿ ಸಮವಸ್ತ್ರ ಧರಿಸಬಾರದು. ಭದ್ರತಾ ಸಿಬ್ಬಂದಿ ನಿಯೋಜನೆಗೆ ಆಗುವ ಖರ್ಚನ್ನು ಅರ್ಜಿದಾರ ಮುಂಚಿತವಾಗಿಯೇ ಜೈಲು ಪ್ರಾಧಿಕಾರಕ್ಕೆ ಪಾವತಿಸಬೇಕು. ಪರೀಕ್ಷೆ ಮುಗಿದ ನಂತರ ಮುಂದಿನ ಪರೀಕ್ಷಾ ದಿನಾಂಕದವರೆಗೆ ಅರ್ಜಿದಾರ ಕೇಂದ್ರ ಕಾರಾಗೃಹದಲ್ಲಿಯೇ ಇರಬೇಕು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪೋಷಕರು ಒದಗಿಸುವ ಅಗತ್ಯ ಪುಸ್ತಕಗಳನ್ನು ಜೈಲು ಅಧಿಕಾರಿಗಳು ಅರ್ಜಿದಾರನಿಗೆ ಪೂರೈಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಇದೇ 15ರಿಂದ 31ರವರಗೆ ಬಿ.ಕಾಂ. ಪದವಿಯ ಮೂರನೇ ಸೆಮಿಸ್ಟರ್ ಪರೀಕ್ಷೆ ನಿಗದಿಯಾಗಿದ್ದು, ಜಾಮೀನು ನೀಡುವಂತೆ ಆರೋಪಿ ಪರ ವಕೀಲರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.