ADVERTISEMENT

ಉಡುಪಿ: ಜುಲೈ 22ರಂದು ಅಪರೂಪದ ನಿಯೋವೈಸ್‌ ಧೂಮಕೇತು ದರ್ಶನ

22 ರಿಂದ 25ರವರೆಗೆ ಬರಿಗಣ್ಣಿನಲ್ಲಿ ವೀಕ್ಷಣೆ ಮಾಡಬಹುದು: ಡಾ.ಎ.ಪಿ. ಭಟ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:43 IST
Last Updated 15 ಜುಲೈ 2020, 15:43 IST
ನಿಯೋವೈಸ್‌ ಧೂಮಕೇತು
ನಿಯೋವೈಸ್‌ ಧೂಮಕೇತು   

ಉಡುಪಿ: ಜುಲೈ 22ರಂದು ಭೂಮಿಗೆ ಸಮೀಪದಲ್ಲಿ ನಿಯೋವೈಸ್ ಧೂಮಕೇತು ಹಾದು ಹೋಗಲಿದ್ದು, ಈ ವಿಸ್ಮಯವನ್ನು ಬರಿಗಣ್ಣಿನಲ್ಲಿ ನೋಡಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

ಸಂಜೆ ವೇಳೆ ಪಶ್ಚಿಮ ಆಕಾಶದಲ್ಲಿ ನಿಯೋವೈಸ್ ಧೂಮಕೇತು ಕಾಣಲಿದೆ. ಇದೇ ಸಮಯಕ್ಕೆ ಪೂರ್ವ ಆಕಾಶದಲ್ಲಿ ವರ್ಷಕ್ಕೊಮ್ಮೆ ಭೂಮಿಗೆ ಸುಮಾರು 30 ಕೋಟಿ ಕಿ.ಮೀ ಹತ್ತಿರಕ್ಕೆ ಬರುವ ಗುರುಗ್ರಹ ಹಾಗೂ ಶನಿಗ್ರಹಗಳನ್ನು ಕೂಡ ಕಾಣಬಹುದು ಎಂದು ತಿಳಿಸಿದ್ದಾರೆ.

ನಿಯೋವೈಸ್‌ ಧೂಮಕೇತುವು ಜುಲೈ 25ರವರೆಗೆ ಗೋಚರಿಸಲಿದೆ. ಸೂರ್ಯನ ಹೊರವಲಯದಲ್ಲಿ ಸೂರ್ಯನ ಸುತ್ತಲೂ ಅಲೆಯುವ ಧೂಮಕೇತುವು ಶೀತಲ ಕಲ್ಲುಂಡೆಯಾಗಿದ್ದು, ಸೂರ್ಯನತ್ತ ಸಮೀಪಿಸುತ್ತಿದೆ.

ADVERTISEMENT

ಸುಮಾರು 5 ಕಿ.ಮೀ ವ್ಯಾಸವಿರುವ ಧೂಮಕೇತು ಸೂರ್ಯನನ್ನು ಸಮೀಪಿಸುತ್ತಿದ್ದಂತೆ ಅದಕ್ಕೆ ಲಕ್ಷ ಕಿ.ಮೀ ಉದ್ದದ ಬಾಲ ಬೆಳೆಯುತ್ತದೆ. ಸೂರ್ಯನ ಬಿಸಿ ಕಿರಣಗಳಿಂದ ಧೂಮಕೇತುವಿನ ಕರಗುವ ತೇವಾಂಶ ಹಾಗೂ ಅನಿಲವನ್ನು ಬಾಲ ಎಂದು ಕರೆಯಲಾಗುತ್ತದೆ ಎಂದು ಡಾ.ಎ.ಪಿ. ಭಟ್‌ ಮಾಹಿತಿ ನೀಡಿದ್ದಾರೆ.

ಹೊಳೆಯುವ ಗುರು, ಶನಿ:ಸೂರ್ಯನಿಂದ ಸರಾಸರಿ 74 ಕೋಟಿ ಕಿ.ಮೀ ದೂರದಲ್ಲಿರುವ ಗುರುಗ್ರಹ ಭೂಮಿಗೆ ಯಾವಾಗಲೂ ಒಂದೇ ಅಂತರದಲ್ಲಿ ಇರುವುದಿಲ್ಲ. ವರ್ಷಕ್ಕೊಮ್ಮೆ 59 ಕೋಟಿ ಕಿ.ಮೀ ಹತ್ತಿರಕ್ಕೆ ಬಂದರೆ, ಆರು ತಿಂಗಳ ಬಳಿಕ 89 ಕೋಟಿ ಕಿ.ಮೀ ದೂರ ಸರಿಯುತ್ತದೆ.

ಹಾಗೆಯೇ, ಶನಿಗ್ರಹ ಸುಮಾರು 140 ಕೋಟಿ ಕಿ.ಮೀ ದೂರದಲ್ಲಿ ಸೂರ್ಯನನ್ನು ಸುತ್ತುತ್ತಿದ್ದರೂ ವರ್ಷಕ್ಕೊಮ್ಮೆ ಭೂಮಿಗೆ ಸಮೀಪವಾಗಿ ಅಂದರೆ 125 ಕೋಟಿ ಕಿ.ಮೀ ಹತ್ತಿರಕ್ಕೆ ಬರುತ್ತದೆ. ಆರು ತಿಂಗಳ ಬಳಿಕ 165 ಕೋಟಿ ಕಿ.ಮೀ ದೂರಕ್ಕೆ ಸರಿಯುತ್ತದೆ. ಈ ವಾರ ಎರಡೂ ಗ್ರಹಗಳು ಭೂಮಿಗೆ ಹತ್ತಿರ ಬರುವುದು ವಿಶೇಷವಾಗಿದ್ದು, ಪೂರ್ವ ಆಕಾಶದಲ್ಲಿ ಸಂಜೆ ವೇಳೆ ವೃಶ್ಚಿಕ ರಾಶಿಯ ಬುಡದಲ್ಲಿ ಹೊಳೆಯಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.