ADVERTISEMENT

ಕೊಡಗು ಪ್ರವಾಹ: ಟ್ವಿಟರ್‌ನಲ್ಲಿ ಭಾವನಾತ್ಮಕ ಪತ್ರ ಬರೆದ ರಶ್ಮಿಕಾ ಮಂದಣ್ಣ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2018, 7:02 IST
Last Updated 26 ಆಗಸ್ಟ್ 2018, 7:02 IST
   

ಕೊಡಗು: ಸತತವಾಗಿ ಸುರಿದ ಭಾರಿ ಮಹಾಮಳೆಯಿಂದ ಕೊಡಗು ತತ್ತರಿಸಿದೆ. ಅಲ್ಲಿನ ಜನರು ಮನೆ, ಜಮೀನು, ಜಾನುವಾರುಗಳನ್ನುಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.‌

ಈ ಕುರಿತು ನಟಿ ರಶ್ಮಿಕಾ ಮಂದಣ್ಣ, ತವರೂರಾದ ಕೊಡಗಿನ ವಸ್ತುಸ್ಥಿತಿ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕ ಪತ್ರವೊಂದನ್ನು ಪ್ರಕಟಿಸಿದ್ದಾರೆ.

ನೆರೆ ಸಂತ್ರಸ್ತರ ನೆರವಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ADVERTISEMENT

ಸದ್ಯ ವರುಣನ ಅಬ್ಬರ ಕೊಂಚ ತಗ್ಗಿದ್ದು, ಕಣ್ಮರೆ ಆಗಿರುವವರಿಗೆ ಹುಡುಕಾಟ ಮುಂದುವರಿದಿದೆ.

ಮಡಿಕೇರಿ ತಾಲ್ಲೂಕಿನ ಜೋಡುಪಾಲದ ಭೂಕುಸಿತ ಪ್ರದೇಶಕ್ಕೆ ಭೂಗರ್ಭ ಶಾಸ್ತ್ರಜ್ಞರು ಬುಧವಾರ ಭೇಟಿ ನೀಡಿ, ಮೊದಲ ಹಂತದ ಅಧ್ಯಯನ ಆರಂಭಿಸಿದ್ದಾರೆ.

*

ರಶ್ಮಿಕಾ ಪ್ರಕಟಿಸಿರುವ ಬರಹ ಈ ಕೆಳಕಂಡಂತಿದೆ.

ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ, ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ಏನೆಂದು ಕೂಗುವುದು.... ನಾ ಹುಟ್ಟಿದ, ಬೆಳೆದ ಆಡಿದ್ದ ಓದಿದ್ದ ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ, ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರು ಪಾಲಾಗಿದ್ದಾರೆ ಇದಕ್ಕೆ ಮೂಗಜೀವಿಗಳು ಹೊರತಾಗಿಲ್ಲ, ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ!

ನಾನು, ನೀನು, ನಂದು, ನಿಂದು, ಮೇಲು –ಕೀಳು, ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ, ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ದ ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರು ಏನು? ಪ್ರಾಣಿಗಳು ಮಾಡಿದ ಪಾಪವಾದರು ಏನು? ದೇವರೆ ಉತ್ತರಿಸು.

ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ..... ನೀರು ನೀರು ನೀರು ಬಿಟ್ಟರೆ ಕಣ್ಣೀರು. ‘ಧೈರ್ಯವಾಗಿರಿ ನಾವಿದ್ದೇವೆ’ ಎಂಬ ನಿಮ್ಮುಗಳ ಮಾತು ನಮ್ಮನ್ನು ಜೀವಂತವಾಗಿರಿಸಿದೆ.

ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು ಪ್ರಪಂಚದ ಮೂಲೆಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ ಮಾಡುತ್ತಿದ್ದೀರಿ, ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕುವಾರದ ಮಾಂಸದೂಟ ಬೇಡವೆಂದು ಮೂರುಲಕ್ಷಗಳನ್ನು ಕೊಡಗಿನಸಂತ್ರಸ್ತರಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ, ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ....

ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ, ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನನಿರ್ಮಿಸಬೇಕಾಗಿದೆ, ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ. –ರಷ್ಮಿಕ ಮಂದಣ್ಣ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.