ADVERTISEMENT

ಕುಕೃತ್ಯ ಒಪ್ಪಿಕೊಂಡ ಕುಮಾರಸ್ವಾಮಿ ಅವರ ವಿರುದ್ಧ ತನಿಖೆಯಾಗಲಿ: ರವಿಕೃಷ್ಣಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 8:53 IST
Last Updated 20 ಅಕ್ಟೋಬರ್ 2020, 8:53 IST
ರವಿಕೃಷ್ಣಾ ರೆಡ್ಡಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ
ರವಿಕೃಷ್ಣಾ ರೆಡ್ಡಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ    

ಬೆಂಗಳೂರು: ತಮ್ಮ ಕಾನೂನು ಬಾಹಿರ ಅಪರಾಧಿ ಕೃತ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆಯಾಗಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ತಾವು ಅಧಿಕಾರದಲ್ಲಿದ್ದಾಗ ಅದನ್ನು ಎಷ್ಟೇ ದುರುಪಯೋಗ ಮಾಡಿಕೊಂಡಿದ್ದರೂ, ಅಕ್ರಮಗಳನ್ನು ಮಾಡಿದ್ದರೂ, ಸಾರ್ವಜನಿಕವಾಗಿ ಮಾತನಾಡುವಾಗ ಏನನ್ನು ಹೇಳಬಹುದು ಎನ್ನುವ ಯಾವುದೇ ಪರಿಜ್ಞಾನ ಇಲ್ಲದ ಮತ್ತು ತಮ್ಮ ಕುಕೃತ್ಯಗಳನ್ನು ನಾಚಿಕೆ ಇಲ್ಲದೆ ಘಂಟಾಘೋಷವಾಗಿ ಸಾರುವ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಇವರು ಸ್ವತಃ ಹೇಳಿಕೊಂಡಂತಹ ಘನಕಾರ್ಯದಿಂದಾಗಿ ತಮಗೆ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸರ್ಕಾರಿ ನೌಕರಿಯನ್ನು ಕಳೆದುಕೊಂಡು ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳು ನಮ್ಮ ರಾಜ್ಯದಲ್ಲಿ ಸಾವಿರಾರು ಜನ ಇದ್ದಾರೆ. ಕೆಪಿಎಸ್‌ಸಿಯ ಅತಿ ಭ್ರಷ್ಟ ಅಧ್ಯಕ್ಷ ಹೆಚ್.ಎನ್. ಕೃಷ್ಣ ಜೈಲಿನಿಂದ ಬಿಡುಗಡೆಯಾಗುವಾಗ ಅವರನ್ನು ಅಲ್ಲಿಂದ ಕಾರಿನಲ್ಲಿ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡು ಕರೆತಂದವರು ಕುಮಾರಸ್ವಾಮಿಯವರು. ಮೋಸಕ್ಕೊಳಗಾದ ಬಡವ ಮತ್ತು ದುರ್ಬಲರ ಶಾಪ ಕಠೋರವಾಗಿರುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನಮ್ಮ ನ್ಯಾಯಾಂಗಕ್ಕೆ ಮತ್ತು ಸರ್ಕಾರಕ್ಕೆ ಕನಿಷ್ಠ ಮಟ್ಟದ ಜವಾಬ್ದಾರಿ ಇದ್ದರೆ ತಮ್ಮ ಕಾನೂನುಬಾಹಿರ ಅಪರಾಧಿ ಕೃತ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಕುಮಾರಸ್ವಾಮಿಯವರ ಮೇಲೆ ಈ ಕೂಡಲೇ ಸ್ವಯಂಪ್ರೇರಿತ ಮೊಕದ್ದಮೆಗಳು ದಾಖಲಾಗಬೇಕು. ತನಿಖೆಯಾಗಬೇಕು’ ಎಂದು ಹೇಳಿದ್ದಾರೆ.

‘ಮಾಡಿದ ಪಾಪದಿಂದ ಎಲ್ಲರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದ ಯಾವುದೋ ಒಂದು ತಿರುವಿನಲ್ಲಿ ಪಾಪಕ್ಕೆ ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ. ಕೆಲವರಿಗೆ ಪದೇಪದೇ ಏಟಿನ ಮೇಲೆ ಏಟು ಬೀಳುತ್ತಿರುತ್ತದೆ. ಪ್ರಜ್ಞಾವಂತ ಸಮಾಜದಿಂದಾಗುವ ಸಾರ್ವಜನಿಕ ಅವಮಾನ ಮತ್ತು ತಿರಸ್ಕಾರಕ್ಕಿಂತ ದೊಡ್ಡ ಶಿಕ್ಷೆ ಯಾವುದೂ ಇಲ್ಲ. ಸಮಯವೇ ದೊಡ್ಡ ಯಮಧರ್ಮರಾಯ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.