ADVERTISEMENT

‘ದೆವ್ವ ಕರೆಯಿತೆಂದು ಆಣೆ ಮಾಡಲು ಹೋಗಲಾದೀತೇ’– ಸುಮಲತಾಗೆ ರವೀಂದ್ರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 11:33 IST
Last Updated 19 ಅಕ್ಟೋಬರ್ 2022, 11:33 IST
ಸುಮಲತಾ
ಸುಮಲತಾ   

ಮೈಸೂರು: ‘ದೆವ್ವ ಕರೆಯಿತೆಂದು ಆಣೆ–ಪ್ರಮಾಣಕ್ಕೆ ಹೋಗಲಾದೀತೇ?’.

–‘ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ಕಮಿಷನ್‌ ಪಡೆದಿರುವುದಾಗಿ ಆರೋಪಿಸುತ್ತಿರುವ ಜೆಡಿಎಸ್‌ನ ಎಲ್ಲಾ 6 ಶಾಸಕರೂ ಮೇಲುಕೋಟೆಗೆ ಬಂದು ದೇವರ ಮುಂದೆ ಪ್ರಮಾಣ ಮಾಡಲಿ’ ಎಂಬ ಮಂಡ್ಯ ಸಂಸದೆ ಸುಮಲತಾ ಅವರಿಗೆ ಆ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಮೇಲಿನಂತೆ ತಿರುಗೇಟು ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಅವರು ಕರೆದಾಕ್ಷಣ ಹೋಗಲಾಗುವುದಿಲ್ಲ. ಉತ್ತಮರು ಕರೆದರೆ ಹೋಗಬಹುದು. ದೆವ್ವ ಕರೆದರೆ ಹೋಗಲಾಗುತ್ತದೆಯೇ? ಅವರ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗಿದೆ. ಅದನ್ನು ಕೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಸುಮಲತಾ ಅಕ್ಕಪಕ್ಕದಲ್ಲಿ ಇರುವವರು ಭ್ರಷ್ಟಾತಿಭ್ರಷ್ಟರು. ಮೈಸೂರು–ಬೆಂಗಳೂರು ಹೆದ್ದಾರಿ ಕಾಮಗಾರಿ ವಿಷಯದಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ‌ ನಡೆದಿದೆ. ಅದರಲ್ಲಿ ಸುಮಲತಾ ಬೆಂಬಲಿಗರು ಭಾಗಿಯಾಗಿದ್ದಾರೆ. ಸುಮಲತಾ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕುಳಿತು ಏನು ಮಾಡಿದ್ದರು? ಇದಕ್ಕೆ ಸಂಬಂಧಿಸಿದಂತೆ ವಿಡಿಯೊ ದಾಖಲೆಗಳಿವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ. ಈಗ ಅಧಿಕಾರಿಗಳ ಮೇಲೆ ಧಮಕಿ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಗುಡುಗಿದರು.

‘ಸುಮಲತಾ ವಿರುದ್ಧ ಜನರು ಈಗಾಗಲೇ ತಿರುಗಿ ಬಿದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.