ಬೆಂಗಳೂರು: ‘ಭ್ರಷ್ಟಾಚಾರದಲ್ಲಿ ‘ಕರ್ನಾಟಕ ನಂಬರ್ 1’ ಆಗಿದೆ ಎಂದು ನಾನು ಹೇಳಿಲ್ಲ. ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಆದರೆ, ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲ ಸರ್ಕಾರಗಳ ಅವಧಿಯಲ್ಲೂ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ತೊಡೆದು ಹಾಕಲು ಶ್ರಮಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಕರ್ನಾಟಕದ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ನನ್ನ ಮಾತನ್ನು ಉತ್ತಮ ಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು. ಭ್ರಷ್ಟಾಚಾರವೇ ಇಲ್ಲ ಎಂದು ಹೇಳಲು ಆಗುವುದಿಲ್ಲ’ ಎಂದರು.
‘ಗುತ್ತಿಗೆದಾರರು ಮಾಡಿರುವ ಭ್ರಷ್ಟಾಚಾರದ ಆರೋಪದ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ. ಹಿಂದೆಲ್ಲ ಐದಾರು ದಶಕ ಬಾಳಿಕೆ ಬರುತ್ತಿದ್ದ ಸರ್ಕಾರಿ ಕಟ್ಟಡಗಳು ಈಗ 10 ವರ್ಷಗಳಲ್ಲಿಯೇ ಬಿದ್ದು ಹೋಗುತ್ತಿವೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಹೇಗೆ ಸಾಧ್ಯ? ಈ ವಿಚಾರವನ್ನು ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದೆ’ ಎಂದರು.
‘ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ಅತಿಯಾದ ಭ್ರಷ್ಟಾಚಾರವಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರವಿಲ್ಲ. ಅಲ್ಲದೇ, ಭ್ರಷ್ಟಾಚಾರ ನಿವಾರಿಸುವ ಉದ್ದೇಶದಿಂದ ಉಪನೋಂದಣಾಧಿಕಾರಿ, ಅಬಕಾರಿ, ಗಣಿ ಮತ್ತು ಭೂವಿಜ್ಞಾನ, ವಾಣಿಜ್ಯ ತೆರಿಗೆ, ಸಾರಿಗೆ ಇಲಾಖೆಗಳಲ್ಲಿ ವರ್ಗಾವಣೆಗೆ ಕೌನ್ಸಿಲಿಂಗ್ ವ್ಯವಸ್ಥೆ ಜಾರಿ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ’ ಎಂದು ರಾಯರಡ್ಡಿ ಹೇಳಿದರು.
‘ನಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪದಡಿ ಹಲವರು ಜೈಲಿಗೆ ಹೋದರು. ಈಗ ಅವರಿಗೆ ನಮ್ಮ ವಿರುದ್ಧ ಮಾತನಾಡಲು ನೈತಿಕ ಹಕ್ಕಿಲ್ಲ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ದಿನದಿಂದ ಭ್ರಷ್ಟಾಚಾರ ಶುರುವಾಗುತ್ತದೆ. ಚುನಾವಣೆ ವೇಳೆ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಭ್ರಷ್ಟಾಚಾರ ಎಷ್ಟು ಹಾಸುಹೊಕ್ಕಾಗಿದೆ ಎಂಬುದಕ್ಕೆ ರಾಯರಡ್ಡಿ ಹೇಳಿಕೆಯೇ ಸಾಕ್ಷಿ. ಗುತ್ತಿಗೆದಾರರ ಸಂಘ ಶೇ60 ಕಮಿಷನ್ ಆರೋಪ ಮಾಡಿದೆ. ಭ್ರಷ್ಟಚಾರ ತಾಂಡವವಾಡುತ್ತಿರುವುದು ಅಂಗೈ ಹುಣ್ಣಿನಷ್ಟೆ ಸತ್ಯಸಿ.ಟಿ.ರವಿ ವಿಧಾನಪರಿಷತ್ ಸದಸ್ಯ
ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರೇ ಕರ್ನಾಟಕ ಭ್ರಷ್ಟಾಚಾರದಲ್ಲೂ ನಂಬರ್–1 ಎಂದಿದ್ದಾರೆ. ಆಡಳಿತ ಪಕ್ಷದ ಶಾಸಕರೂ ಆದ ರಾಯರಡ್ಡಿ ಅವರ ಮಾತು ರಾಜ್ಯ ಸರ್ಕಾರ ವೈಖರಿಗೆ ಕನ್ನಡಿನಿಖಿಲ್ ಕುಮಾರಸ್ವಾಮಿ ಯುವ ಜೆಡಿಎಸ್ ಅಧ್ಯಕ್ಷ
- ಸರ್ಕಾರದ ಮುಖವಾಡ ಬಯಲು:
ವಿಜಯೇಂದ್ರ ‘ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ 1 ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಯ ಕರಾಳ ಮುಖವಾಡವನ್ನು ಬಯಲು ಮಾಡಿ ರಾಜ್ಯದ ಘನತೆ ಕುಗ್ಗಿರುವುದನ್ನು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಬಿಚ್ಚಿಟ್ಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ‘ಈ ಮೂಲಕ ನಿಮ್ಮ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟತೆಯ ಕಪ್ಪು ಮಸಿ ಮೆತ್ತಿಸಿಕೊಂಡಿರುವುದನ್ನು ಅನಾವರಣ ಮಾಡಿ ಕರ್ನಾಟಕ ವಿಶ್ವಮಟ್ಟದಲ್ಲಿ ತಲೆ ತಗ್ಗಿಸುವ ಪರಿಸ್ಥಿತಿ ಇರುವುದನ್ನು ವಿವರಿಸಿದ್ದಾರೆ’ ಎಂದು ಅವರು ‘ಎಕ್ಸ್’ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.