ADVERTISEMENT

ಅಬಕಾರಿ ಕಂದಾಯ ಬಾಕಿ ₹607 ಕೋಟಿ: ಆರ್‌.ಬಿ.ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 20:07 IST
Last Updated 23 ಫೆಬ್ರುವರಿ 2024, 20:07 IST
ಆರ್‌.ಬಿ.ತಿಮ್ಮಾಪುರ
ಆರ್‌.ಬಿ.ತಿಮ್ಮಾಪುರ   

ಬೆಂಗಳೂರು: ರಾಜ್ಯದಲ್ಲಿನ ಅಬಕಾರಿ ಕಂದಾಯ ಬಾಕಿ ₹607 ಕೋಟಿ ಇದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದ್ದಾರೆ.

ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2023ರ ಮಾರ್ಚ್‌ ಅಂತ್ಯದವರೆಗೆ ಅಸಲು ₹169 ಕೋಟಿ, ಬಡ್ಡಿ ₹438 ಕೋಟಿ ಇದೆ. ಬಾಕಿದಾರರು ಮತ್ತು ಅವರ ವಾರಸುದಾರರ ಚರ ಮತ್ತು ಸ್ಥಿರ ಆಸ್ತಿಗಳನ್ನು ಪತ್ತೆ ಹಚ್ಚಿ ಭೂ ಕಂದಾಯ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು. ‘ಕರಸಮಾಧಾನ ಯೋಜನೆ’ ಮೂಲಕ ಈಗಾಗಲೇ ₹107 ಕೋಟಿ ವಸೂಲಿ ಮಾಡಲಾಗಿದೆ. ಮಾರ್ಚ್‌ 31ರ ಒಳಗೆ ಬಾಕಿ ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದಿದ್ದಾರೆ. 

ಕೃಷ್ಣಾ ಮೇಲ್ದಂಡೆ ವಿಳಂಬ: 

ADVERTISEMENT

ಕೃಷ್ಣ ಮೇಲ್ದಂಡೆ ಯೋಜನೆಯ ಹಂತ ನಿಧಾನವಾಗಲು ಸರ್ಕಾರದ ಧೋರಣೆಗಳೂ ಕಾರಣ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. 

ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಇದುವರೆಗೂ 1.22 ಲಕ್ಷ ಹೆಕ್ಟೇರ್‌ಗೆ ನೀರು ದೊರೆತಿದೆ. ₹51,148 ಕೋಟಿ ಯೋಜನಾ ವೆಚ್ಚದಲ್ಲಿ 16,900 ಕೋಟಿ ವೆಚ್ಚ ಮಾಡಲಾಗಿದೆ. ಕೇಂದ್ರದ ಗೆಜೆಟ್‌ ಅಧಿಸೂಚನೆಯ ನಂತರ ಅನುದಾನ ಲಭ್ಯತೆಯ ಅನುಸಾರ ಯೋಜನೆ ಪೂರ್ಣಗೊಳಿಸಲಾಗುವುದು. ಏತ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೂ ಒತ್ತು ನೀಡಲಾಗುವುದು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.