ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಂತಹ ಅಹಿತಕರ ಘಟನೆಗಳು ಭವಿಷ್ಯದಲ್ಲಿ ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಸಲ್ಲಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಕ್ರೀಡಾಂಗಣದ ಸಾಮರ್ಥ್ಯ ಕೇವಲ 35 ಸಾವಿರ ಮಾತ್ರ. ಆದರೆ, ಘಟನೆ ನಡೆದ ದಿನ 3 ಲಕ್ಷ ಜನ ಜಮಾಯಿಸಿದ್ದರು. ಅಂದು ಉಚಿತ ಪ್ರವೇಶ ನೀಡಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿದ್ದ ಜನರು ಒಮ್ಮೆಲೇ ಕ್ರೀಡಾಂಗಣದ ಒಳಗೆ ನುಗ್ಗಲು ಯತ್ನಿಸಿದಾಗ ದುರ್ಘಟನೆ ಜರುಗಿದೆ. ಇಂತಹ ಘಟನೆಗಳನ್ನು ತಡೆಯಲು ಎಸ್‌ಒಪಿ ರೂಪಿಸಲಾಗುತ್ತಿದೆ. ಶೀಘ್ರವೇ ಈ ಎಸ್‌ಒಪಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಇದನ್ನು ಮನ್ನಿಸಿದ ನ್ಯಾಯಪೀಠ, ‘ಈ ಪ್ರಕರಣ ಅಮಾಯಕ ಜೀವಗಳು ಮೃತಪಟ್ಟ ಕುರಿತಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪಿಐಎಲ್. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಏನಾದರೂ ಕ್ರಮ ಕೈಗೊಳ್ಳುತ್ತಿದೆಯೇ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ಎಸ್‌ಒಪಿ ಅಥವಾ ಶಿಷ್ಟಾಚಾರ ಇದೆಯೇ ಎಂಬುದರತ್ತ ಮಾತ್ರವೇ ಗಮನ ಹರಿಸಲು ಇಚ್ಛಿಸುತ್ತದೆ’ ಎಂದು ಮೌಖಿಕವಾಗಿ ನುಡಿಯಿತು. ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ಡಿಎನ್‌ಎ ಸಂಸ್ಥೆ ಪರ ಪದಾಂಕಿತ ಹಿರಿಯ ವಕೀಲರಾದ ಬಿ.ಕೆ.ಸಂಪತ್ ಕುಮಾರ್, ಅಮಿಕಸ್ ಕ್ಯೂರಿ ಪದಾಂಕಿತ ಹಿರಿಯ ವಕೀಲೆ ಎಸ್.ಸುಶೀಲಾ, ನಂದಕುಮಾರ್ ಮಧ್ಯಂತರ ಅರ್ಜಿದಾರಾಗಿ ಸೇರ್ಪಡೆ ಹೊಂದಲು ಬಯಸಿರುವ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಬಿ.ನರಗುಂದ ಮತ್ತು ಕೆ.ದಿವಾಕರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.