ADVERTISEMENT

ಕಾಲ್ತುಳಿತ ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:25 IST
Last Updated 5 ಜೂನ್ 2025, 15:25 IST
<div class="paragraphs"><p>ಬೆಂಗಳೂರು ಕಾಲ್ತುಳಿತ</p></div>

ಬೆಂಗಳೂರು ಕಾಲ್ತುಳಿತ

   

ಪಿಟಿಐ

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತದ ತನಿಖೆಯ ಹೊಣೆಯನ್ನು ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯೊಬ್ಬರಿಗೆ ವಹಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ADVERTISEMENT

ಈ ಕುರಿತು ವಿವಿಧೆಡೆ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದರಲ್ಲಿ ಸರ್ಕಾರವನ್ನು ಅಪರಾಧಿ ಎಂದು ನಮೂದಿಸಬೇಕು. ಸಮರ್ಪಕ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

‘ಕೇರಳದಲ್ಲಿ ಕರ್ನಾಟಕದ ಆನೆ ತುಳಿತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ₹25 ಲಕ್ಷ ಪರಿಹಾರ ಘೋಷಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೃತಪಟ್ಟ ಎಲ್ಲ 11 ಮಂದಿಯ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ಕೊಡಬೇಕು. ತೆಲಂಗಾಣದಲ್ಲಿ ಅಲ್ಲು ಅರ್ಜುನ್‌ ಅವರ ಸಿನಿಮಾ ಬಿಡುಗಡೆ ವೇಳೆ ಕಾಲ್ತುಳಿತ ನಡೆದಿತ್ತು. ಅಲ್ಲೂ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಇತ್ತು. ಘಟನೆ ಸಂಬಂಧ ಅಲ್ಲು ಅರ್ಜುನ್‌ ಅವರನ್ನು ಬಂಧಿಸಲಿಲ್ಲವೇ? ಬೆಂಗಳೂರಿನಲ್ಲಿ ನಡೆದ ದುರ್ಘಟನೆಗೆ ಯಾರನ್ನು ಬಂಧಿಸುತ್ತೀರಿ’ ಎಂದು ವಿಜಯೇಂದ್ರ ಪ್ರಶ್ನಿಸಿದರು.

ವೈಫಲ್ಯದ ಹೊಣೆಯನ್ನು ಸರ್ಕಾರ ಹೊರಲು ಸಿದ್ಧವಿಲ್ಲ. ಹಾಗಾಗಿಯೇ ಒಬ್ಬ ಜಿಲ್ಲಾಧಿಕಾರಿಗೆ ತನಿಖೆಯ ಜವಾಬ್ದಾರಿ ನೀಡಿದೆ. ಜಿಲ್ಲಾಧಿಕಾರಿ ತನಿಖೆ ನಡೆಸಿದರೆ ಅಪರಾಧಿ ಸ್ಥಾನದಲ್ಲಿರುವ ಮುಖ್ಯಮಂತ್ರಿ, ಸಚಿವರನ್ನು ತನಿಖೆ ಮಾಡಲು ಆಗುತ್ತದೆಯೇ ಎಂದರು. 

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಅಶೋಕ

ಹೈಕೋರ್ಟ್‌ ನ್ಯಾಯಮೂರ್ತಿಗಳ ಸುಪರ್ದಿನಲ್ಲೇ ತನಿಖೆ ನಡೆಯಬೇಕು. ಅದಕ್ಕಾಗಿ ಎಸ್‌ಐಟಿ ರಚಿಸಬೇಕು. ವರದಿಯನ್ನು ನೇರವಾಗಿ ಹೈಕೋರ್ಟ್‌ಗೆ ಸಲ್ಲಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಎಲ್ಲ ಸಾವುಗಳಿಗೆ ನ್ಯಾಯ ನೀಡಬೇಕು ಎಂದು ಆರ್‌. ಅಶೋಕ ಒತ್ತಾಯಿಸಿದರು.

ಟ್ರೋಫಿ ಎತ್ತಿ ಫೋಟೊ ತೆಗೆಸಿಕೊಂಡು ಸಂಭ್ರಮಪಟ್ಟವರು ಸತ್ತ ಅಮಾಯಕರ ಶವಕ್ಕೆ ಹೆಗಲು ಕೊಡಲು ಬರಲಿಲ್ಲ. ವಿಮಾನನಿಲ್ದಾಣಕ್ಕೆ ಹೋಗಿ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟವರು ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಇದು ಹೃದಯಹೀನ ಸರ್ಕಾರ. ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಕಾರ್ಯಕ್ರಮ ಎಂದು ಹೇಳಿ ಸಿದ್ದರಾಮಯ್ಯ ಜವಾಬ್ದಾರಿ ಮರೆತಿದ್ದಾರೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನೋಡಿದ್ದಾರೆ ಎಂದು ದೂರಿದರು.

ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆರಂಭವಾಗುವ ಮೊದಲೇ ಸಾವಿನ ಸರಣಿ ಆರಂಭವಾಗಿತ್ತು. ಇದು ಗೊತ್ತಿದ್ದರೂ ಸಚಿವರ ಫೋಟೊ ಶೂಟ್‌ಗಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲಾಗಿದೆ. ಜನರು ಸತ್ತ ಸುದ್ದಿ ಗೊತ್ತಾದ ಕೂಡಲೇ ಕಾರ್ಯಕ್ರಮ ರದ್ದು ಮಾಡಬೇಕಿತ್ತು ಎಂದರು.

ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಿ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಜಿಲ್ಲಾಧಿಕಾರಿ ಸರ್ಕಾರದ ಲೋಪದೋಷದ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿ, ವರದಿ ನೀಡುವರೇ?
ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಚಿವರ ಮಕ್ಕಳ ಒತ್ತಡಕ್ಕೆ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತೇ? ಕಾಲ್ತುಳಿತದ ಸಾವಿನ ಹೊಣೆ ಹೊತ್ತು ರಾಜ್ಯ ಸರ್ಕಾರ ತಕ್ಷಣ ರಾಜೀನಾಮೆ ನೀಡಬೇಕು
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ 
11 ಜನರ ಆಟದ ಗೆಲುವಿನ ಸಂಭ್ರಮಕ್ಕೆ 11 ಜನರನ್ನು ರಾಜ್ಯ ಸರ್ಕಾರ ಬಲಿ ಪಡೆದಿದೆ. ಸದ್ಯ ಈ ಘಟನೆಗೆ ಬಿಜೆಪಿ, ಆರ್‌ಎಸ್‌ಎಸ್‌ ನಾಯಕರು ಕಾರಣವೆಂದು ಮುಖ್ಯಮಂತ್ರಿ ಏಕೆ ಹೇಳುತ್ತಿಲ್ಲ?
ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ 
ಕಾಲ್ತುಳಿತಕ್ಕೆ ಸಿಲುಕಿ ಜನರು ಮೃತಪಟ್ಟಿದ್ದರೂ, ಆಡಳಿತ ಪಕ್ಷದ ಪ್ರಮುಖರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಉಪಮುಖ್ಯಮಂತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಪ್‌ಗೆ ಮುತ್ತಿಕ್ಕುತ್ತಿದ್ದರು.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.