ADVERTISEMENT

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ: ತಪ್ಪಿತಸ್ಥರ ವಿರುದ್ಧ ಕ್ರಮ; ಪಾಟೀಲ

ಮೈಕಲ್‌ ಕುನ್ಹಾ ವರದಿ ಒಪ್ಪಿಕೊಂಡ ಸಚಿವ ಸಂಪುಟ ಸಭೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 22:30 IST
Last Updated 24 ಜುಲೈ 2025, 22:30 IST
ಎಚ್.ಕೆ. ಪಾಟೀಲ
ಎಚ್.ಕೆ. ಪಾಟೀಲ   

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್‌ ಮೈಕಲ್ ಕುನ್ಹಾ ಆಯೋಗದ ವರದಿಯ ಶಿಫಾರಸುಗಳನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ತಪ್ಪಿತಸ್ಥರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್‌ ಸ್ವರೂಪದ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.

ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವರದಿ ಶಿಫಾರಸು ಮಾಡಿದೆ. ಅಲ್ಲದೇ, ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಒಳಾಡಳಿತ ಇಲಾಖೆಗೆ ಸೂಚಿಸಲಾಗುವುದು ಎಂದರು.

ADVERTISEMENT

ವರದಿಯ ಮುಖ್ಯ ಅಂಶಗಳು:

‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೂರ್ವಾನುಮತಿ ಇಲ್ಲದೇ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರುವಾಗ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆ ನಿಯಮವನ್ನು ಉಲ್ಲಂಘಿಸಲಾಗಿತ್ತು. ಅಲ್ಲದೇ, ಅಂದಿನ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌, ಹೆಚ್ಚುವರಿ ಪೊಲೀಸ್ ಕಮಿಷನರ್‌ ವಿಕಾಸ್ ಕುಮಾರ್ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್‌.ಟೆಕ್ಕಣ್ಣನವರ್, ಕಬ್ಬನ್ ಪಾರ್ಕ್‌ ಉಪವಿಭಾಗದ ಹಿಂದಿನ ಎಸಿಪಿ ಸಿ.ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಿರೀಶ್‌ ಎ.ಕೆ ಅವರಿಗೆ ಈ ವಿಜಯೋತ್ಸವ ಅನಧಿಕೃತ ಎಂಬುದು ಸ್ಪಷ್ಟವಾಗಿ ಗೊತ್ತಿತ್ತು. ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಆಯೋಜಿಸಲಾಗುತ್ತಿದೆ ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆದರೂ ವಿಜಯೋತ್ಸವ ತಡೆಯುವಲ್ಲಿ ವಿಫಲರಾದರು. ಆಯೋಜಕರು ಸೂಕ್ತ ವ್ಯವಸ್ಥೆ ಮಾಡುವುದಕ್ಕೂ ಮೊದಲೇ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಇತರ ಪೊಲೀಸ್ ಅಧಿಕಾರಿಗಳು ಸಂಘಟಕರೊಂದಿಗೆ ಶಾಮೀಲಾಗಿ ಬಂದೋಬಸ್ತ್‌ ಕಾರ್ಯದಲ್ಲಿ ತೊಡಗಿದ್ದರು’ ಎಂದು ವರದಿ ಉಲ್ಲೇಖಿಸಿದೆ.

‘ಕಾಲ್ತುಳಿತಕ್ಕೆ ಆಯೋಜಕರೇ ಹೊಣೆಗಾರರು. ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಗುಂಪನ್ನು ಸರಿಯಾಗಿ ನಿರ್ವಹಿಸಲಿಲ್ಲ. ಪ್ರವೇಶಕ್ಕೆ ಸಂಬಂಧಿಸಿದಂತೆ ಬೇಕಾಬಿಟ್ಟಿಯಾಗಿ ಉದ್ಘೋಷಣೆ ಮಾಡುತ್ತಿದ್ದರು. ಇದೇ ಕಾಲ್ತುಳಿತ, ಸಾವು–ನೋವುಗಳಿಗೆ ಮೂಲ ಕಾರಣ. ಪೂರ್ವ ತಯಾರಿ ಇಲ್ಲದೇ, ತಪ್ಪು ನಿರ್ಧಾರಗಳ ಮೂಲಕ ಸಂಘಟಕರೇ ಅಲ್ಲಿ ಅನಾಹುತಕಾರಿ ಸ್ಥಿತಿಯನ್ನು ಸೃಷ್ಟಿಸಿದರು. ಇದರಲ್ಲಿ ಆಯೋಜಕರ ದಿವ್ಯ ನಿರ್ಲಕ್ಷ್ಯ ಎದ್ದುಕಾಣುತ್ತದೆ’ ಎಂದು ಹೇಳಿದೆ.

ವರದಿ ಓದಿಲ್ಲ: ಈ ದುರಂತದಲ್ಲಿ ಕೇವಲ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಿ ಇತರ ಹಿರಿಯ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯವರ ಮಾಜಿ ರಾಜಕೀಯ ಕಾರ್ಯದರ್ಶಿಯ ಪಾತ್ರವನ್ನು ವರದಿಯಲ್ಲಿ ಪ್ರಸ್ತಾಪಿಸದೇ ಇರುವುದನ್ನು ಸುದ್ದಿಗಾರರು ಪ್ರಶ್ನಿಸಿದಾಗ, ‘ವರದಿಯನ್ನು ಪೂರ್ತಿ ಓದಿಲ್ಲ’ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

‘ಕಾರಣರಾದವರ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗುವುದು’ ಎಂಬ ಪ್ರಶ್ನೆಗೆ, ಇನ್ನಷ್ಟೇ ತೀರ್ಮಾನ ಆಗಬೇಕು ಎಂದರು.

ದುರಂತಕ್ಕೆ ಕಾರಣಕರ್ತರು ಯಾರ್‍ಯಾರು?

ರಾಯಲ್ ಚಾಲೆಂಜರ್ಸ್‌ ಪ್ರೈವೆಟ್‌ ಲಿಮಿಟೆಡ್‌/ಆರ್‌ಸಿಬಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್‌ ಕೆಎಸ್‌ಸಿಎ ಮತ್ತು ಅದರ ಅಧ್ಯಕ್ಷ ರಘುರಾಮ್‌ ಭಟ್‌ ಮಾಜಿ ಕಾರ್ಯದರ್ಶಿ ಎಸ್‌.ಶಂಕರ್‌ ಮಾಜಿ ಖಜಾಂಚಿ ಇ.ಎಸ್‌.ಜಯರಾಮ್‌ ಆರ್‌ಸಿಎಸ್‌ಪಿಎಲ್‌ನ ಉಪಾಧ್ಯಕ್ಷ ರಾಜೇಶ್‌ ಮೆನನ್‌ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಟಿ. ವೆಂಕಟವರ್ಧನ್ ಉಪಾಧ್ಯಕ್ಷ ಸುನಿಲ್‌ ಮಾಥುರ್‌. ಬೆಂಗಳೂರು ನಗರದ ಈ ಹಿಂದಿನ ಪೊಲೀಸ್ ಕಮಿಷನರ್‌ ಬಿ.ದಯಾನಂದ್‌ ಹಿಂದಿನ ಹೆಚ್ಚುವರಿ ಪೊಲೀಸ್ ಕಮಿಷನರ್‌ ವಿಕಾಸ್ ಕುಮಾರ್ ವಿಕಾಸ್‌ ಕೇಂದ್ರ ವಿಭಾಗದ ಹಿಂದಿನ ಡಿಸಿಪಿ ಶೇಖರ್ ಎಚ್‌.ಟೆಕ್ಕಣ್ಣನವರ್ ಕಬ್ಬನ್ ಪಾರ್ಕ್‌ ಉಪವಿಭಾಗದ ಹಿಂದಿನ ಎಸಿಪಿ ಸಿ.ಬಾಲಕೃಷ್ಣ ಕಬ್ಬನ್ ಪಾರ್ಕ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಿರೀಶ್‌ ಎ.ಕೆ. ಈ ದುರಂತಕ್ಕೆ ಕಾರಣರು. ಇವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.