ADVERTISEMENT

ರಾಜೀನಾಮೆಗೆ ಸಿದ್ಧ: ಗುಡುಗಿದ ಮುಖ್ಯಮಂತ್ರಿ ಯಡಿಯೂರಪ್ಪ

ಸಚಿವ ಸ್ಥಾನದ ಬೇಡಿಕೆಯಿಟ್ಟ ವಚನಾನಂದ ಸ್ವಾಮೀಜಿಗೆ ಯಡಿಯೂರಪ್ಪ ತಿರುಗೇಟು

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 2:04 IST
Last Updated 15 ಜನವರಿ 2020, 2:04 IST
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಆಯೋಜಿಸಿದ್ದ ಹರ ಜಾತ್ರಾ ಮಹೋತ್ಸವದಲ್ಲಿ ವಚನಾನಂದ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ನಡೆದ ಕ್ಷಣ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಆಯೋಜಿಸಿದ್ದ ಹರ ಜಾತ್ರಾ ಮಹೋತ್ಸವದಲ್ಲಿ ವಚನಾನಂದ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ನಡೆದ ಕ್ಷಣ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಬೆಂಗಳೂರು/ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಸ್ವಾಮೀಜಿ ಹೇರಿದ ಒತ್ತಡದಿಂದ ಕೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಸ್ವಾಮೀಜಿ ಸಲಹೆ ನೀಡಿದರೆ ಕುಳಿತು ಚರ್ಚಿಸುತ್ತೇನೆ. ಬೇಡ ಅಂದರೆ ನಾಳೆಯೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲು ಸಿದ್ಧ’ ಎಂದು ಕಿಡಿಕಾರಿದರು.

ಹರಿಹರದ ವೀರಶೈವ–ಲಿಂಗಾಯತ ಪಂಚಮಸಾಲಿ ಮಠ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ‘ನಮ್ಮ ಸಮಾಜದ 13 ಶಾಸಕರಿದ್ದು, ಅವರಲ್ಲಿ ಮೂವರಿಗಾದರೂ ಸಚಿವ ಸ್ಥಾನ ನೀಡಬೇಕು. ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡದೇ ಕೈಬಿಟ್ಟರೆ ಇಡೀ ಸಮಾಜ ನಿಮ್ಮ ಕೈಬಿಡುತ್ತದೆ’ ಎಂದು ಎಚ್ಚರಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಕೂಡ ವೇದಿಕೆಯಲ್ಲಿದ್ದರು.

ADVERTISEMENT

ವಚನಾನಂದರ ಮಾತಿನಿಂದ ಸಿಟ್ಟಾದ ಯಡಿಯೂರಪ್ಪ, ‘ಬುದ್ಧಿ... ನಿಮ್ಮ ಬಾಯಲ್ಲಿ ಇಂಥ ಮಾತು ಬರಬಾರದು. ನೀವು ಸಲಹೆ ಕೊಡಬೇಕು; ಅದನ್ನು ಬಿಟ್ಟು ಬೆದರಿಕೆ ಹಾಕಬಾರದು. ಈ ರೀತಿ ಮಾತನಾಡುವುದಾದರೆ ನಾನು ಹೊರಡುತ್ತೇನೆ’ ಎಂದು ಎದ್ದು ನಿಂತರು. ಮುಖ್ಯಮಂತ್ರಿಯನ್ನು ಸಮಾಧಾನ ಪಡಿಸಿದ ಸ್ವಾಮೀಜಿ ‘ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಿಮ್ಮ ಪರಿಸ್ಥಿತಿ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾಗೂ ಗೊತ್ತಾಗಲಿ ಎಂದು ಹೀಗೆ ಹೇಳುತ್ತಿದ್ದೇವೆ’ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡ, ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡದ ವರಿಷ್ಠರ ನಿಲುವಿನಿಂದ ಕಂಗೆಟ್ಟ ಯಡಿಯೂರಪ್ಪ ಈ ರೀತಿಯಲ್ಲಿ ಅಸಹನೆ ಹೊರಹಾಕಿರಬಹುದುಎಂಬ ಚರ್ಚೆಯೂನಡೆದಿದೆ.

ಜನವರಿಯಲ್ಲಿ ವಿಸ್ತರಣೆ ಅನುಮಾನ

ಸಚಿವರಾಗಲೇಬೇಕೆಂಬ ನೂತನ ಶಾಸಕರ ಕನಸು ಸದ್ಯಕ್ಕೆ ಭಗ್ನವಾಗಿದೆ. ಜನವರಿಯಲ್ಲಿಯೇ ಸಂಪುಟ ವಿಸ್ತರಣೆ ಅನುಮಾನ ಎಂಬ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕಾರಿಪುರದಲ್ಲಿ ಮಾತನಾಡಿದ ಯಡಿಯೂರಪ್ಪ, ‘ರಾಜ್ಯಕ್ಕೆ ಬರಲಿರುವ ಅಮಿತ್ ಶಾ ಜತೆ ಚರ್ಚಿಸುತ್ತೇನೆ. 19ಕ್ಕೆ ದಾವೋಸ್‌ಗೆ ತೆರಳಲಿದ್ದು, ಮರಳಿದ ಬಳಿಕ ವಿಸ್ತರಣೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.