ADVERTISEMENT

ಕಾಸರಗೋಡಿನ ಕನ್ನಡಿಗರ ಹಿತ ಕಾಪಾಡಲು ಬದ್ಧ: ಸಚಿವ ಸುನೀಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 16:22 IST
Last Updated 7 ಮಾರ್ಚ್ 2022, 16:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಗಡಿನಾಡು ಕಾಸರಗೋಡು ಮತ್ತು ಮಂಜೇಶ್ವರದಲ್ಲಿರುವ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅಲ್ಲಿನ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಆ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ಸಿನ ಸಲೀಂ ಅಹ್ಮದ್‌, ‘ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಲ್ಲಿ ಕನ್ನಡ ಗೊತ್ತಿಲ್ಲದ ಶಿಕ್ಷಕರನ್ನು ಕೇರಳ ಸರ್ಕಾರ ನೇಮಕ ಮಾಡಿರುವುದು ಶೋಚನೀಯ ವಿಚಾರ. ಕನ್ನಡ ಗೊತ್ತಿಲ್ಲದ ಶಿಕ್ಷಕರು ಹೇಗೆ ಪಾಠ ಮಾಡಲು ಸಾಧ್ಯ? ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಬದ್ಧ ಅಲ್ಪಸಂಖ್ಯಾತರ ಸ್ಥಾನಮಾನ ಇರುವುದರಿಂದ, ಅಲ್ಲಿ ಕನ್ನಡ ಗೊತ್ತಿರುವ ಶಿಕ್ಷಕರನ್ನು ನೇಮಿಸುವಂತೆ 2016ರಲ್ಲಿ ಕೇರಳ ಹೈಕೋರ್ಟ್‌ ಆದೇಶಿಸಿದೆ. ಆದರೂ ಕನ್ನಡ ಮಾಧ್ಯಮ ಶಿಕ್ಷಕರನ್ನು ನೇಮಿಸದಿರುವುದು ವಿಪರ್ಯಾಸ’ ಎಂದರು.

‘ಮೂರು ವರ್ಷದ ಹಿಂದೆ ಇಲ್ಲಿನ ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕ ಆಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಶಿಕ್ಷಕರನ್ನು ಕೇರಳ ಸರ್ಕಾರ ವಾಪಸು ಕರೆದುಕೊಂಡಿತ್ತು. ಈಗ ಮತ್ತೆ ಕನ್ನಡ ಗೊತ್ತಿಲ್ಲದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಮಕ್ಕಳಿಗೆ ಮಲಯಾಳ ಭಾಷೆ ಗೊತ್ತಿಲ್ಲ, ಶಿಕ್ಷಕರಿಗೆ ಕನ್ನಡ ಗೊತ್ತಿಲ್ಲದೇ ಇರುವುದರಿಂದ ಈ ಶಾಲೆಗಳಲ್ಲಿ ದಾಖಲಾಗುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಕೇರಳ ಸರ್ಕಾರದ ಮೇಲೆ ಒತ್ತಡ ತಂದು, ಗಡಿ ಭಾಗದ ವಿದ್ಯಾರ್ಥಿಗಳ ಹಿತ ಕಾಯಬೇಕು’ ಎಂದೂ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.