ADVERTISEMENT

ಸುಸ್ಥಿತಿಯಲ್ಲಿದ್ದ ಸಿದ್ಧಾರ್ಥ ಶವ | ಉಪ್ಪು ನೀರು, ಶೀತದಿಂದ ಕೊಳೆಯದ ದೇಹ?

36 ಗಂಟೆಗಳಾದರೂ ಸುಸ್ಥಿತಿಯಲ್ಲಿ ಶವ

ವಿ.ಎಸ್.ಸುಬ್ರಹ್ಮಣ್ಯ
Published 31 ಜುಲೈ 2019, 20:07 IST
Last Updated 31 ಜುಲೈ 2019, 20:07 IST
   

ಉದ್ಯಮಿ ವಿ.ಜಿ.ಸಿದ್ಧಾರ್ಥ ಹೆಗ್ಡೆ ಅವರ ಮೃತದೇಹ 36 ಗಂಟೆಗಳ ಬಳಿಕವೂ ಕೊಳೆಯದೇ ಬಹುತೇಕ ಸುಸ್ಥಿತಿಯಲ್ಲಿದ್ದುದು ಅಚ್ಚರಿಗೆ ಕಾರಣವಾಗಿತ್ತು. ಆದರೆ, ಥಂಡಿಯಾದ ವಾತಾವರಣ, ಸಿಹಿ ಮತ್ತು ಉಪ್ಪು ನೀರಿನ ಮಿಶ್ರಣವೇ ದೇಹ ಕೊಳೆಯದಂತೆ ತಡೆದಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸೋಮವಾರ ಸಂಜೆ 6 ಗಂಟೆಯಿಂದ ಸಿದ್ಧಾರ್ಥ ನಾಪತ್ತೆಯಾಗಿದ್ದರು. ಬುಧವಾರ ಬೆಳಿಗ್ಗೆ 6.30ರ ಸುಮಾರಿಗೆ ಮೃತದೇಹ ಪತ್ತೆಯಾಗಿತ್ತು. ಅವರು ನದಿಗೆ ಧುಮುಕಿದ್ದಾರೆ ಎನ್ನಲಾದ ನೇತ್ರಾವತಿ ಸೇತುವೆಯಿಂದ ಸುಮಾರು 5 ಕಿ.ಮೀ. ದೂರದ ಹೊಯ್ಗೆ ಬಜಾರ್‌ ಬಳಿ ಶವ ಪತ್ತೆಯಾಗಿತ್ತು. ಒಂದೂವರೆ ದಿನದ ಬಳಿಕವೂ ಶವ ಕೊಳೆಯದೇ ಇದ್ದುದು ಅಚ್ಚರಿಗೆ ಕಾರಣವಾಗಿತ್ತು. ಈ ಕುರಿತು ಥರಹೇವಾರಿ ಅಭಿಪ್ರಾಯಗಳೂ ಹರಿದಾಡತೊಡಗಿವೆ.

ಈ ಕುರಿತು ‘ಪ್ರಜಾವಾಣಿ’ ಜೊತೆಮಾತನಾಡಿದ ರಾಜ್ಯ ವೈದ್ಯಕೀಯ ಕಾನೂನು (ಮೆಡಿಕೋ ಲೀಗಲ್‌) ಸಲಹೆಗಾರರೂ ಆಗಿರುವ ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ್‌ಕುಮಾರ್‌ ಶೆಟ್ಟಿ, ‘ಬಿಸಿ
ಯಾದ ನೀರಿನಲ್ಲಿ ದೇಹ ಬೇಗ ಕೊಳೆಯುತ್ತದೆ. ಈಗ ಥಂಡಿ ವಾತಾವರಣ ಇದೆ. 36 ಗಂಟೆಗಳ ಕಾಲವೂ ಮೃತದೇಹ ನೀರಿನೊಳಗೆ ತೇಲುತ್ತಾ ಇದ್ದಂತೆ ಕಾಣುತ್ತದೆ. ಇದರಿಂದಾಗಿಯೇ ಸಿದ್ಧಾರ್ಥ ಅವರ ಶವ ಕೊಳೆಯದೇ ಉಳಿದಿರುವ ಸಾಧ್ಯತೆ ಇದೆ’ ಎಂದರು.

ADVERTISEMENT

ಜಲಚರ ಜೀವಿಗಳ ಚಟುವಟಿಕೆ ಹೆಚ್ಚಾಗಿದ್ದರೆ ಶವ ಬೇಗ ಕೊಳೆಯುತ್ತದೆ. ಏಡಿ, ಮೀನು ಮುಂತಾದ ಜೀವಿಗಳು ಶವವನ್ನು ಕಚ್ಚಿ, ಗಾಯಗೊಳಿಸಿದರೆ ಬೇಗ ಕೊಳೆಯಲು ಆರಂಭವಾಗುತ್ತದೆ. ಫೋಟೊಗಳನ್ನು ಗಮನಿಸಿದರೆ ಸಿದ್ಧಾರ್ಥ ಅವರ ಶವದಲ್ಲಿ ಹೆಚ್ಚಿನ ಗಾಯಗಳಾದಂತೆ ಕಂಡುಬಂದಿಲ್ಲ. ಇದು ಕೂಡ ದೇಹ ಹೆಚ್ಚಿನ ಪ್ರಮಾಣದಲ್ಲಿ ಕೊಳೆಯದಂತೆ ಇರಲು ಕಾರಣವಾಗಿರಬಹುದು ಎಂದು ಹೇಳಿದರು.

ಉಪ್ಪು ನೀರು: ಮೃತ ಉದ್ಯಮಿ ಧುಮುಕಿದ್ದಾರೆ ಎನ್ನಲಾದ ಸ್ಥಳ ಮತ್ತು ಶವ ದೊರೆತಿರುವ ಸ್ಥಳ ನೇತ್ರಾವತಿ ನದಿಯು ಸಮುದ್ರ ಸೇರುವ ಅಳಿವೆ ಬಾಗಿಲಿನ ವ್ಯಾಪ್ತಿಯಲ್ಲೇ ಇದೆ. ಇಲ್ಲಿ ಸಿಹಿ ನೀರು ಮತ್ತು ಉಪ್ಪು ನೀರು ಮಿಶ್ರಣವಾಗುತ್ತಿರುತ್ತದೆ. ಉಪ್ಪು ದೇಹ ಕೆಡದಂತೆ ಸಂರಕ್ಷಿಸುವ ಸಾಮರ್ಥ್ಯ ಹೊಂದಿದೆ. ಉಪ್ಪು ನೀರಿನಲ್ಲಿ ಮುಳು ಗಿದ್ದ ಕಾರಣದಿಂದಲೂ ಸುರಕ್ಷಿತವಾಗಿ ಉಳಿದಿರಬಹುದು ಎಂದು ತಿಳಿಸಿದರು.

ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವೈದ್ಯರೊಬ್ಬರು ಕೂಡ, ಥಂಡಿಯಾದ ವಾತಾವರಣ ಮತ್ತು ಉಪ್ಪು ನೀರಿನಿಂದಾಗಿಯೇ ಉದ್ಯಮಿಯ ದೇಹ ಹೆಚ್ಚಿನ ಪ್ರಮಾಣದಲ್ಲಿ ಕೊಳೆಯದಿರಲು ಕಾರಣವಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೃಢಕಾಯ ಶರೀರವೂ ಕಾರಣ: ‘ಸಿದ್ಧಾರ್ಥ ದೃಢಕಾಯ ಶರೀರವನ್ನು ಹೊಂದಿದ್ದಂತೆ ಕಾಣಿಸುತ್ತದೆ. ಬೊಜ್ಜು ಬಾರದಂತೆ ಶರೀರವನ್ನು ಕಾಯ್ದುಕೊಂಡಿದ್ದರು. ಇಂತಹ ಮೈಕಟ್ಟು ಇರುವ ದೇಹಗಳು ನೀರಿನಲ್ಲಿ ಬೇಗನೆ ಕೊಳೆಯುವುದಿಲ್ಲ’ ಎಂದು ಡಾ.ಸುರೇಶ್‌ಕುಮಾರ್‌ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.