ADVERTISEMENT

ಕೋವಿಡ್‌ ಕೈಮೀರಲು ವಿಳಂಬ–ನಿರ್ಲಕ್ಷ್ಯವೇ ಕಾರಣ

ಹೊಸ ತಳಿಯ ತೀವ್ರತೆ ಊಹಿಸದ ದೇಶಿ ವಿಜ್ಞಾನಿಗಳು * ಪರೀಕ್ಷೆಗಳಲ್ಲಿ ವಿಶ್ವಾಸಾರ್ಹತೆ ಕೊರತೆ

ಗುರು ಪಿ.ಎಸ್‌
Published 26 ಏಪ್ರಿಲ್ 2021, 19:42 IST
Last Updated 26 ಏಪ್ರಿಲ್ 2021, 19:42 IST
   

ಬೆಂಗಳೂರು:ಕೋವಿಡ್ ನಿರ್ವಹಣೆಯಲ್ಲಿ ಒಂದು ವರ್ಷದ ಅನುಭವ ಇದ್ದರೂ, ಲಸಿಕೆ ಕಂಡು ಹಿಡಿದಿದ್ದರೂ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿರುವ ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲು ಆಗದೇ ಇರುವುದಕ್ಕೆ ಸರ್ಕಾರದ ವಿಳಂಬ ನೀತಿ, ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬ ಚರ್ಚೆ ಶುರುವಾಗಿದೆ.

ಕೋವಿಡ್ ಹರಡುವಿಕೆ ತಡೆಲಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವೇ ನೇಮಿಸಿದ್ದ ತಜ್ಞರ ಸಮಿತಿ ಕಳೆದ ಸಾಲಿನ ನವೆಂಬರ್‌ನಲ್ಲೇ ಸಲಹೆ ನೀಡಿತ್ತು. ಹಾಗಿದ್ದರೂ ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರ ಅಸಡ್ಡೆ ತೋರಿದ್ದು, ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಇದರೊಂದಿಗೆ ಹಲವು ಕಾರಣಗಳನ್ನು ಅವರು ಪಟ್ಟಿ ಮಾಡುತ್ತಾರೆ.

ರಾಜಧಾನಿಯಲ್ಲಿ ಒಂದೊಂದು ಅಪಾರ್ಟ್‌ಮೆಂಟ್‌ಗಳಲ್ಲಿ 30ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುವವರೆಗೆ ಆ ಪ್ರದೇಶವನ್ನು ಸೀಲ್‌ಡೌನ್‌ಗೊಳಿಸುವ ಕಾರ್ಯವನ್ನು ಬಿಬಿಎಂಪಿ ಮಾಡಲಿಲ್ಲ. ಅಕ್ಕ–ಪಕ್ಕದಲ್ಲಿ ಸೋಂಕಿತರು ಓಡಾಡಿದರೂ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಯಿತು.

ADVERTISEMENT

ಈಗ ಶೇ 80ರಿಂದ 90ರಷ್ಟು ಜನ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಅವರ ಕೈಗೆ ಸೀಲ್‌ ಹಾಕಲಾಗುವುದು ಎಂದಿದ್ದ ಬಿಬಿಎಂಪಿ ಆ ಕಾರ್ಯವನ್ನೂ ಸರಿಯಾಗಿ ಮಾಡುತ್ತಿಲ್ಲ. ಕುಟುಂಬದಲ್ಲಿ ಬೇರೆ ಯಾರೂ ಇಲ್ಲದ ಇಂತಹ ಸೋಂಕಿತರು ಅನಿವಾರ್ಯವಾಗಿ ಹೊರಗಡೆ ಓಡಾಡುತ್ತಲೇ ಇದ್ದರು.

ಚುನಾವಣೆ ರ‍್ಯಾಲಿಗಳು, ಪ್ರತಿಭಟನೆಗಳು, ಧಾರ್ಮಿಕ ಸಮಾವೇಶ, ಜಾತ್ರೆ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಲಕ್ಷಾಂತರ ಜನ ಸೇರುವುದು ಮುಂದುವರಿಯಿತು. ಇದು ಯಾವುದಕ್ಕೂ ಕಡಿವಾಣ ಹಾಕುವ ನಿಷ್ಠುರ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲೇ ಇಲ್ಲ.

ಮಾನಸಿಕ ಸಮಸ್ಯೆಗಳ ನಿರ್ಲಕ್ಷ್ಯ:ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ನೀಡಿದಷ್ಟು ಆದ್ಯತೆ ಮನೋರೋಗದಂತಹ ಸಮಸ್ಯೆಗಳಿಗೆ ನೀಡಲಿಲ್ಲ. ಯಾರೇ ಒಬ್ಬರಿಗೆ ಕೋವಿಡ್ ಬಂದರೂ ಅವರ ಕುಟುಂಬ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದೆ. ತಂದೆ–ತಾಯಿ ಇಬ್ಬರೂ ಕೋವಿಡ್ ಪೀಡಿತರಾಗಿದ್ದರೆ ಆಯಾ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತದೆ. ಹಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಂತೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಪ್ರಕರಣಗಳ ಹೆಚ್ಚಳಕ್ಕೆ ಪರೋಕ್ಷವಾಗಿ ಈ ಅಂಶವೂ ಕಾರಣವಾಗುತ್ತಿದೆ ಎಂದು ನಿಮ್ಹಾನ್ಸ್‌ನ ಮನೋವೈದ್ಯರೊಬ್ಬರು ಹೇಳಿದರು.

ದೇಶದ ಅಥವಾ ರಾಜ್ಯದ ಜೀವವಿಜ್ಞಾನ ವಲಯ ಇನ್ನೂ ಸುಧಾರಿಸಿಲ್ಲ. ಈ ಅಲೆ ಎರಡನೆಯದೋ, ಮೂರನೆಯದೋ ಎಂಬುದು ನಮ್ಮ ವಿಜ್ಞಾನಿಗಳಿಗೆ ಸರಿಯಾಗಿ ಗೊತ್ತಿಲ್ಲ. ಅಮೆರಿಕ, ಇಂಗ್ಲೆಂಡ್‌ನ ವಿಜ್ಞಾನಿಗಳ ಹೇಳಿಕೆಯ ಮೇಲೆಯೇ ಅವಲಂಬಿತರಾಗಬೇಕಾಗಿದೆ. ಇಲ್ಲಿ ಹರಡುತ್ತಿರುವ ಸೋಂಕಿನ ಪ್ರಭಾವ–ಪರಿಣಾಮಗಳ ಚಿತ್ರಣ ಸರಿಯಾಗಿ ಸಿಗುತ್ತಿಲ್ಲ ಎನ್ನುತ್ತಾರೆ ತಜ್ಞರೊಬ್ಬರು.

ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೂ ಜನ ಕೋವಿಡ್‌ಗೆ ತುತ್ತಾಗುತ್ತಿರುವುದು ಕೋವಿಡ್‌ ತಳಿಯನ್ನು ಗ್ರಹಿಸುವಲ್ಲಿ ನಾವು ವಿಫಲರಾಗಿರುವುದಕ್ಕೆ ಸಾಕ್ಷಿ. ಈ ರೀತಿ ತಳಿಯ ಅಸ್ಪಷ್ಟ ಚಿತ್ರಣವು ಕೋವಿಡ್‌ ಪರಿಹಾರ ಕ್ರಮಗಳ ಮೇಲೂ ಪರಿಣಾಮ ಬೀರುತ್ತದೆ. ಬ್ರಿಟನ್‌ ತಳಿ ದೇಶ ಪ್ರವೇಶಿಸಲು ಕಾರಣ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸದಿರುವುದು.

ವಿದೇಶಗಳಿಂದ ವಿಮಾನದಲ್ಲಿ ರಾಜ್ಯಕ್ಕೆ ಬಂದ ಪ್ರಯಾಣಿಕರ ಮೇಲೆ ಈ ಬಾರಿ ಹೆಚ್ಚು ನಿಗಾ ಇಡಲಿಲ್ಲ. ಅವರ ವರದಿಗಳ ತಪಾಸಣೆ, ಕ್ವಾರಂಟೈನ್ ಕಾರ್ಯ ಸಮರ್ಪಕವಾಗಿ ನಡೆಯಲಿಲ್ಲ. ಇಲ್ಲಿ ‘ಜರಡಿ’ ಹಿಡಿಯುವ ಕೆಲಸವಾಗಿದ್ದರೆ ಎರಡನೇ ಅಲೆ ಸೃಷ್ಟಿಯಾಗುತ್ತಿರಲಿಲ್ಲ ಎಂದೂ ತಜ್ಞರು ಹೇಳುತ್ತಾರೆ.

‘ಹೊಸ ತಳಿಯ ವೇಗ ಹೆಚ್ಚು’
‘ಸರ್ಕಾರ ಎರಡನೇ ಅಲೆ ತಡೆಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಹೊಸ ತಳಿ ಪರಿಣಾಮ ತೀವ್ರವಾಗಿದೆ. ಊಹಿಸಿದ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಹರಡುತ್ತಿದೆ. ಹೀಗಾಗಿ ನಿರ್ವಹಣೆ ಸವಾಲಾಗಿದೆ’ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ
ಸದಸ್ಯ ಡಾ.ಗಿರಿಧರ ಬಾಬು ಹೇಳಿದರು.

‘ಕಳೆದ ಬಾರಿಗಿಂತ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ದುಪ್ಪಟ್ಟು ಮಾಡಲಾಗಿತ್ತು. ಬೆಂಗಳೂರಿನಲ್ಲಿ ಜಯನಗರ ಮತ್ತು ಕೆ.ಸಿ. ಜನರಲ್‌ ಆಸ್ಪತ್ರೆ ಎಲ್ಲ ಹಾಸಿಗೆಗಳೂ ವೈದ್ಯಕೀಯ ಆಕ್ಸಿಜನ್‌ ಸೌಲಭ್ಯ ಹೊಂದಿದ್ದವು’ ಎಂದು ಹೇಳಿದರು.

ಪ್ರಕರಣಗಳ ಹೆಚ್ಚಳಕ್ಕೆ ಕಾರಣ
*ಸೀಲ್‌ಡೌನ್‌–ಲಾಕ್‌ಡೌನ್‌ ಘೋಷಿಸುವಲ್ಲಿನ ವಿಳಂಬ
*ವಿದೇಶಗಳಿಂದ ಬರುವ ವಿಮಾನಗಳನ್ನು ನಿರ್ಬಂಧಿಸದಿರುವುದು
*ವಿದೇಶಿ ಪ್ರಯಾಣಿಕರ ತಪಾಸಣೆ, ಪರೀಕ್ಷೆ ಪ್ರಕ್ರಿಯೆಯ ಅಸರ್ಮಪಕ ನಿರ್ವಹಣೆ
*ರಾಜಕೀಯ ರ‍್ಯಾಲಿ, ಧಾರ್ಮಿಕ ಸಮಾವೇಶ, ಸಭೆ–ಸಮಾರಂಭಗಳು ಹೆಚ್ಚಳ
*ಮಾಸ್ಕ್‌ ಧರಿಸದ, ಅಂತರ ಕಾಪಾಡಿಕೊಳ್ಳದ ಕೆಲವರ ನಿರ್ಲಕ್ಷ್ಯ
*ಕೋವಿಡ್‌ ಪೀಡಿತರು, ಅವರ ಕುಟುಂಬದರ ಮಾನಸಿಕ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸದಿರುವುದು
*ಸೋಂಕಿನ ಹೊಸ ಪ್ರಭೇದದ ಪರಿಣಾಮ ಊಹಿಸುವಲ್ಲಿ ವಿಫಲ
*ಸೋಂಕಿನ ಸ್ವರೂಪ ತಿಳಿಯಲು ವಿದೇಶಿ ವಿಜ್ಞಾನಿಗಳ ಮೇಲೆ ಅವಲಂಬನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.