ADVERTISEMENT

ಉನ್ನತ ಶಿಕ್ಷಣ ಇಲಾಖೆಯಲ್ಲಿ 5 ಸಾವಿರ ಹುದ್ದೆ ಶೀಘ್ರ ಭರ್ತಿ: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 14:14 IST
Last Updated 27 ಜನವರಿ 2025, 14:14 IST
ಎಂ.ಸಿ. ಸುಧಾಕರ್
ಎಂ.ಸಿ. ಸುಧಾಕರ್   

ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರೂ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಐದು ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಗೆ ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಸೋಮವಾರ ಹಮ್ಮಿಕೊಂಡಿದ್ದ ‘ಹೊಸ ಹಾದಿ’ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

2021ರಲ್ಲಿ ಆರಂಭವಾದ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗೆ ಹಲವು ವಿಘ್ನಗಳು ಎದುರಾಗಿದ್ದವು. ವಿಶೇಷ ವರ್ಗಾವಣೆ, ಕಲ್ಯಾಣ ಕರ್ನಾಟಕ ಮೀಸಲಾತಿ ಹಂಚಿಕೆ, ನ್ಯಾಯಾಲಯದ ಪ್ರಕರಣ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಇತ್ಯರ್ಥಪಡಿಸಿಕೊಂಡು ನೇಮಕಾತಿ ಆದೇಶ ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಕೌಶಲ ಕಲಿಕೆಗೆ ಆದ್ಯತೆ ನೀಡಲಾಗಿದ್ದು, ಹಲವು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಹೊಸದಾಗಿ ನೇಮಕವಾದವರು ಗುಣಮಟ್ಟದ ಬೋಧನೆಯತ್ತ ಗಮನಹರಿಸಬೇಕು ಎಂದರು.

ADVERTISEMENT

ಕಾರ್ಯಾಗಾರ ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಮಾಜದ ಬಹುಮುಖ್ಯ ಆಧಾರ ಸ್ತಂಭಗಳಲ್ಲಿ ಶಿಕ್ಷಕ ಸಮುದಾಯವೂ ಒಂದು. ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರ್ಕಾರ ಲಂಚ ಪಡೆಯದೆ, ಶಿಫಾರಸು ಇಲ್ಲದೆ ಎಲ್ಲರಿಗೂ ನೇಮಕಾತಿ ಆದೇಶ ನೀಡಿದೆ. ಅಂತಹ ದಾರಿಯಲ್ಲಿ ಅಧ್ಯಾಪಕರು ನಡೆದು, ಸಮಾಜಕ್ಕೆ ಆಸ್ತಿಯಾಗುವಂತಹ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಇದು ಸಾಮಾಜಿಕ ಜಾಲತಾಣಗಳ ಯುಗ. ಶಿಕ್ಷಕ ತಪ್ಪು ಹೇಳಿದರೆ ಕ್ಷಣಾರ್ಧದಲ್ಲಿ ಗುರುತಿಸಲಾಗುತ್ತದೆ. ಹಾಗಾಗಿ, ಸಾಕಷ್ಟು ಸಿದ್ಧತೆ ಇರಬೇಕು. ಪಠ್ಯ ಹೊರತಾದ ವಿಷಯಗಳ ಕಲಿಕೆಗೂ ಆದ್ಯತೆ ನೀಡಬೇಕು ಎಂದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಶ್ರೀಕರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಎನ್‌. ಮಂಜುಶ್ರೀ, ಆಡಳಿತಾಧಿಕಾರಿ ಶೋಭಾ ಉಪಸ್ಥಿತರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.