ADVERTISEMENT

Micro Finance: ಮೈಕ್ರೊ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಇಲ್ಲ

ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 23:30 IST
Last Updated 7 ಫೆಬ್ರುವರಿ 2025, 23:30 IST
   

ಬೆಂಗಳೂರು: ಸಾಲ ವಸೂಲಿ ಸಂದರ್ಭದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿಗಳು ಮತ್ತು ಲೇವಾದೇವಿದಾರರು ಅನುಸರಿಸುವ ಕಾನೂನುಬಾಹಿರ ಕ್ರಮಗಳು ಹಾಗೂ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರೂಪಿಸಿರುವ, ‘ಕರ್ನಾಟಕ ಮೈಕ್ರೊ ಫೈನಾನ್ಸ್‌ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025’ ಅನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ತಿರಸ್ಕರಿಸಿದ್ದಾರೆ.

ಈ ಸಂಬಂಧ ರಾಜಭವನದಿಂದ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯಪಾಲರು ಪತ್ರದಲ್ಲಿ ಎತ್ತಿರುವ ಆಕ್ಷೇಪಗಳಿಗೆ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಪ್ರತಿಕ್ರಿಯೆ ಬರೆದಿದ್ದು, ಆಕ್ಷೇಪಗಳನ್ನು ಅಲ್ಲಗೆಳೆದಿದ್ದಾರೆ. ಈ ಮೂಲಕ, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಮತ್ತೂ ಮುಂದುವರಿದಂತಾಗಿದೆ.

ಮೈಕ್ರೊ ಫೈನಾನ್ಸ್‌ ಕಂಪನಿಗಳು ನೀಡಿದ ಕಾನೂನುಬದ್ಧ ಸಾಲ ಮತ್ತು ಅದರ ಮೇಲಿನ ಬಡ್ಡಿ ವಸೂಲಿ ಮಾಡುವಲ್ಲಿ ಜಪ್ತಿ, ಅವಹೇಳನ, ಬೆದರಿಕೆ, ಹರಾಜು ಮೊದಲಾದ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಅಂಶಗಳನ್ನು ಸುಗ್ರೀವಾಜ್ಞೆ ಹೊಂದಿದೆ. ಜತೆಗೆ ನೋಂದಣಿ ಮತ್ತು ಪರವಾನಗಿ ಇಲ್ಲದವರು ನೀಡಿರುವ ಸಾಲ ರದ್ದಾಗುತ್ತದೆ ಎಂದೂ ಹೇಳಿದೆ.

ADVERTISEMENT

ಈ ಅಂಶಗಳಿಗೆ ರಾಜ್ಯಪಾಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಗ್ರೀವಾಜ್ಞೆಯಿಂದ ಜನರಿಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ವಿವರಿಸುವ ದತ್ತಾಂಶ ಮತ್ತು ಮಾಹಿತಿಗಳನ್ನು ಸುಗ್ರೀವಾಜ್ಞೆ ಹೊಂದಿಲ್ಲ. ಇದು ಗಂಭೀರ ವಿಚಾರವಾಗಿರುವ ಕಾರಣ, ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಕೂಲಂಕಷವಾಗಿ ಚರ್ಚಿಸಿ ಕಾನೂನು ರೂಪಿಸಿ ಎಂದು ಸರ್ಕಾರಕ್ಕೆ ಸೂಚಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ, ‘ಸಂತ್ರಸ್ತ ಜನರಿಗೆ ತಕ್ಷಣದಿಂದಲೇ ಕಾನೂನಿನ ರಕ್ಷಣೆ ದೊರೆಯಲಿ ಎಂದು ಸುಗ್ರೀವಾಜ್ಞೆ ಸಿದ್ಧಪಡಿಸಲಾಗಿದೆ. ಅದು ಸಹ ಮುಂದೆ ಸದನದಲ್ಲಿ ಚರ್ಚೆಗೆ ಬಂದು, ನಂತರ ಕಾಯ್ದೆಯಾಗಲಿದೆ. ಇದೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡೇ, ರಾಜ್ಯ ಸರ್ಕಾರವು ಸಂವಿಧಾನವು ಕೊಟ್ಟಿರುವ ಪರಮಾಧಿಕಾರದ ಅಡಿಯಲ್ಲಿ ಸುಗ್ರೀವಾಜ್ಞೆ ಸಿದ್ದಪಡಿಸಿದೆ’ ಎಂದು ಉತ್ತರಿಸಿದ್ದಾರೆ.

‘ಅಧಿಕಾರಿಗಳ ಲಾಬಿ’

‘ಸಾಲ ವಸೂಲಾತಿಯಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಗಳ ಬಲವಂತದ ಕ್ರಮಗಳ ನಿಯಂತ್ರಣಕ್ಕೆ ಈ ಸುಗ್ರೀವಾಜ್ಞೆಯ ಅವಶ್ಯಕತೆಯೇ ಇಲ್ಲ’ ಎಂದು ರಾಜ್ಯ ಸರ್ಕಾರದ ಕೆಲ ಉನ್ನತ ಅಧಿಕಾರಿಗಳು ರಾಜ್ಯಪಾಲರ ಬಳಿ ಚರ್ಚಿಸಿದ್ದಾರೆ. ಈ ಕಾರಣದಿಂದಲೇ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್‌ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರುವ ನಾಲ್ಕೈದು ಅಧಿಕಾರಿಗಳು ಈಚೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ‘ಮೈಕ್ರೊ ಫೈನಾನ್ಸ್‌ ಕಂಪನಿಗಳ ನಿಯಂತ್ರಣಕ್ಕೆ ಈಗಾಗಲೇ ಕಾನೂನುಗಳಿವೆ. ಹೊಸ ಕಾನೂನಿನ ಅವಶ್ಯಕತೆ ಇಲ್ಲ’ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಸುಗ್ರೀವಾಜ್ಞೆಯ ಸಂಬಂಧ ಕಾನೂನು ಸಚಿವ ಎಚ್‌.ಕೆ.ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಈ ಅಧಿಕಾರಿಗಳು ಇಂಥದ್ದೇ ಆಕ್ಷೇಪಗಳನ್ನು ಎತ್ತಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.