ADVERTISEMENT

ರೇಖಲಗೆರೆ ಗ್ರಾಮದಲ್ಲಿ ಸ್ವಚ್ಛತೆ ಕೊರತೆ: 15 ಜನರಿಗೆ ಡೆಂಗಿ, ಟೈಫಾಯಿಡ್

ಸೊಳ್ಳೆಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 22:03 IST
Last Updated 4 ಏಪ್ರಿಲ್ 2021, 22:03 IST
ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿರುವ ಬೃಹತ್ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ನೀರು ಹರಿಯದೆ ನಿಂತ್ತಿರುವುದು
ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿರುವ ಬೃಹತ್ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ನೀರು ಹರಿಯದೆ ನಿಂತ್ತಿರುವುದು   

ರೇಖಲಗೆರೆ (ನಾಯಕನಹಟ್ಟಿ, ಚಿತ್ರದುರ್ಗ ಜಿ.): ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ಸ್ವಚ್ಛತೆ ಕೊರತೆಯಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಿದ್ದು, 10 ದಿನಗಳಿಂದ 15 ಜನರು ಡೆಂಗಿ ಮತ್ತು ಟೈಫಾಯಿಡ್ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಕಸದರಾಶಿ ಬಿದ್ದಿದೆ. ಚರಂಡಿಗಳು ಕಟ್ಟಿಕೊಂಡಿವೆ. ಸಮಪರ್ಕವಾಗಿ ಕಸದ ವಿಲೇವಾರಿ ಆಗುತ್ತಿಲ್ಲ. ಗ್ರಾಮದ ಮಧ್ಯ ಭಾಗದಲ್ಲಿರುವ ನೀರಿನ ಟ್ಯಾಂಕ್‌ನಿಂದ ವ್ಯರ್ಥವಾಗಿ ಹೊರಬರುವ ನೀರು ಮತ್ತು ಗ್ರಾಮದ ಚರಂಡಿ ನೀರು ದೊಡ್ಡ ಮೋರಿಯಲ್ಲಿ ಸರಾಗವಾಗಿ ಹರಿಯದೇ ಒಂದೇ ಕಡೆ ಸಂಗ್ರಹವಾಗಿ ರಾಡಿಯಾಗಿದೆ. ಇದರಿಂದ ಸಂಜೆಯಾಗುತ್ತಲೇ ಸೊಳ್ಳೆಗಳ ಹಾವಳಿ ಹೆಚ್ಚಿದೆ. ದೊಡ್ಡಮೋರಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗ್ರಾಮದಲ್ಲಿ 10 ದಿನಗಳಿಂದ ಪ್ರತಿ ಮನೆಯಲ್ಲೂ ಜ್ವರಕ್ಕೆ ತುತ್ತಾಗಿ ಜನರು ನರಳುತ್ತಿದ್ದಾರೆ. ನಾಯಕನಹಟ್ಟಿ, ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಜನರು ಅಲೆದಾಡುತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಅಶೋಕ, ಪ್ರಕಾಶ ತಿಳಿಸಿದ್ದಾರೆ.

ADVERTISEMENT

‘ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರಿನ ಮಾದರಿಯನ್ನು ಕೂಡಲೇ ಪರೀಕ್ಷೆಗೆ ಒಳಳಪಡಿಸಬೇಕು. ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು. ರಾತ್ರಿ ವೇಳೆಯಲ್ಲಿ ಗ್ರಾಮದ ತುಂಬೆಲ್ಲಾ ಧೂಮೀಕರಣ ವ್ಯವಸ್ಥೆ ಮಾಡಬೇಕು. ಗ್ರಾಮದ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಸರ್ವೆ ನಡೆಸಬೇಕು, ಆರೋಗ್ಯ ತಪಾಸಣೆಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಬಿ. ವೀರೇಶ, ಬಸಮ್ಮ, ಗ್ರಾಮಸ್ಥರಾದ ಜಿ.ಎಂ. ತಿಪ್ಪೇಸ್ವಾಮಿ, ಕೆ. ಪ್ರಹ್ಲಾದ, ಎಚ್. ಮಲ್ಲೇಶ್ ಆಗ್ರಹಿಸಿದ್ದಾರೆ.

*
ಜ್ವರಪೀಡಿತ ವ್ಯಕ್ತಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಪರಿಸರ ಸ್ವಚ್ಛತೆಗೆ ಜಾಗೃತಿ ಮೂಡಿಸಲಾಗುವುದು.
-ಡಾ.ಬಿ.ಜಬೀವುಲ್ಲಾ. ಆರೋಗ್ಯ ವೈದ್ಯಾಧಿಕಾರಿ, ಮುಸ್ಟಲಗುಮ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.