ADVERTISEMENT

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 17:49 IST
Last Updated 29 ಆಗಸ್ಟ್ 2020, 17:49 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಪ್ರವಾಹದಿಂದಈ ವರ್ಷವೂ ಭಾರಿ ಪ್ರಮಾಣದ ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಎಡವಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ, ನಷ್ಟದ ಪ್ರಮಾಣದ ವರದಿ ತರಿಸಿಕೊಂಡು ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಕಳೆದ ವರ್ಷ ಮಳೆಗೆ ಮನೆ ಕಳೆದುಕೊಂಡವರಿಗೆ ಸರ್ಕಾರ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ. ಹಳ್ಳಿಗಳ ಸ್ಥಳಾಂತರವಾಗಿಲ್ಲ. ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ನಡೆದಿಲ್ಲ ಎಂದು ದೂರಿದರು.

ADVERTISEMENT

‘ಈ ವಿಷಯವನ್ನು ಅಧಿವೇಶನದಲ್ಲಿ ಪ್ರಶ್ನಿಸಿದರೆ ಸರ್ಕಾರ ಸರಿಯಾಗಿ ಉತ್ತರ ನೀಡುವುದಿಲ್ಲ. ಕಳೆದ ಬಾರಿ ನನ್ನ ಮಾತು ಕೇಳಿಸಿಕೊಳ್ಳಲು ಕೂಡಾ ಸಿದ್ಧವಿರಲಿಲ್ಲ. ಈ ಬಾರಿಯ ಅಧಿವೇಶನದಲ್ಲೂ ಈ ವಿಷಯಗಳನ್ನು ಪ್ರಶ್ನಿಸುತ್ತೇನೆ’ ಎಂದರು.

‘ಕಂದಾಯ ಸಚಿವ ಅಶೋಕ ಅವರು ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟು, ಪ್ರಧಾನಿಗಳ ಮನವೊಲಿಕೆ ಮಾಡಿ ಪರಿಹಾರದ ಹಣ ಸಿಗುವವರೆಗೂ ಹಿಡಿದ ಕಾರ್ಯದಿಂದ ಹಿಂದೆ ಸರಿಯಬಾರದು’ ಎಂದರು.

ವಿವಾದ ಮಾಡಿಕೊಂಡಿದ್ದು ತಪ್ಪು: ‘ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಂಡಿದ್ದರೆ ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಸ್ಥಿತಿ ಮೂಡುತ್ತಿರಲಿಲ್ಲ. ಈ ಹೋರಾಟದಲ್ಲಿ ಕನ್ನಡಿಗರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ತಕ್ಷಣ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ‘ಡಿ.ಜೆ. ಹಳ್ಳಿ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗಲೇ ಯಾರನ್ನೂ ಅಪರಾಧಿಗಳು ಅಥವಾ ಅಮಾಯಕರು ಎಂದು ನಿರ್ಧರಿಸಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.