ಬೆಂಗಳೂರು: ‘ಹುಬ್ಬಳ್ಳಿಯಲ್ಲಿ ನಡೆದ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮುಖ್ಯಮಂತ್ರಿ ಜೊತೆ ಚರ್ಚಿಸಿ ಕುಟುಂಬಕ್ಕೆ ಶೀಘ್ರದಲ್ಲಿ ಪರಿಹಾರ ವಿತರಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ತಿಪ್ಪಣ್ಣ ಕಮಕನೂರ ಅವರು ವಿಷಯ ಪ್ರಸ್ತಾಪಿಸಿ, ‘ಅಂಜಲಿ ಅಂಬಿಗೇರ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಯಾಕೆ’ ಎಂದು ಪ್ರಶ್ನಿಸಿದರು. ಬಿಜೆಪಿಯ ಎನ್. ರವಿಕುಮಾರ್ ಕೂಡ ಅದಕ್ಕೆ ದನಿಗೂಡಿಸಿದರು.
ಆಗ ಪರಮೇಶ್ವರ, ‘ಕೊಲೆ ಪ್ರಕರಣಗಳಿಗೆ ಸಾಮಾನ್ಯವಾಗಿ ಸರ್ಕಾರದಿಂದ ಪರಿಹಾರ ನೀಡುವುದಿಲ್ಲ. ಘಟನೆ ನಡೆದ ಬಳಿಕ ಆಕೆಯ ನಿವಾಸಕ್ಕೆ ಭೇಟಿ ನೀಡಿ ಅಜ್ಜಿ ಜೊತೆ ಮಾತನಾಡಿದ್ದೇನೆ. ಯುವತಿಯ ಕುಟುಂಬದ ಬಡತನ ನೋಡಿದಾಗ ಎಂಥವರಿಗಾದರೂ ಕನಿಕರ, ಅನುಕಂಪ ಬರುತ್ತದೆ. ಹೀಗಾಗಿ, ಈ ಕೃತ್ಯವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಕಲ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಕೊಳೆಗೇರಿ ಮಂಡಳಿ ಅಥವಾ ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವುದಾಗಿ ಯುವತಿಯ ಅಜ್ಜಿಗೆ ಭರವಸೆ ನೀಡಿದ್ದೇನೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಆಶ್ರಯ ಯೋಜನೆಯಡಿ ಮನೆ ನೀಡಲು ಈಗಾಗಲೇ ಒಪ್ಪಿದ್ದಾರೆ. ತಕ್ಷಣ ಮನೆ ಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದರು.
‘ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿದೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಎಲ್ಲ ಸಾಕ್ಷ್ಯಗಳನ್ನೂ ಸಂಗ್ರಹಿಸಲಾಗಿದೆ. ಹೀಗಾಗಿ, ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸುವ ಅಗತ್ಯ ಇಲ್ಲ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.