ಬೆಂಗಳೂರು: ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ ಕುರಿತು ಅಧ್ಯಯನ ನಡೆಸಲು ಕೆಪಿಸಿಸಿ ನೇಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್ ನೇತೃತ್ವದ ಸತ್ಯಶೋಧನಾ ಸಮಿತಿಯು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗುರುವಾರ ಮಧ್ಯಂತರ ವರದಿ ಸಲ್ಲಿಸಿದೆ.
ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಕರಾವಳಿ ಭಾಗದಲ್ಲಿ ನಡೆಯುವ ಕೆಲವು ಘಟನೆಗಳು ಆತಂಕ ಹುಟ್ಟುಹಾಕಿದೆ. ಕೋಮು ದ್ವೇಷದ ಪರಿಣಾಮ ಸರಣಿ ಹತ್ಯೆಗಳು ನಡೆದಿವೆ. ಇಂತಹ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಸ್ಥಳೀಯರ ಭಾವನೆ, ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಅಲ್ಲಿಗೆ ಪಕ್ಷದಿಂದ ಸತ್ಯಶೋಧನಾ ಸಮಿತಿ ಕಳುಹಿಸಲಾಗಿತ್ತು’ ಎಂದರು.
ಮಧ್ಯಂತರ ವರದಿಯಲ್ಲಿ ಏನಿದೆ: ಕರಾವಳಿಯಲ್ಲಿ ನಡೆದ ಕೋಮು ಹತ್ಯೆಗಳಿಗೆ ಹಲವು ಕಾರಣಗಳನ್ನು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಜಕೀಯ, ಧರ್ಮ, ಮಾಫಿಯಾ, ಹೊರಗಿನ ಬೆಂಬಲ, ಪೊಲೀಸ್ ನಿಷ್ಕ್ರಿಯತೆ, ವ್ಯಾಪಕ ಪ್ರಚಾರ ಕೋಮು ಘಟನೆಗಳಿಗೆ ಪ್ರಮುಖ ಕಾರಣ ಎಂದೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
‘ರಾಜಕೀಯ ನಾಯಕರು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ಮತ್ತು ಸಂಘ ಪರಿವಾರದವರು ಧಾರ್ಮಿಕತೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಇತರೆ ಜಾತ್ಯತೀತ ರಾಜಕೀಯ ನಾಯಕರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿಲ್ಲ. ಅಲ್ಲದೆ, ಬಿಜೆಪಿ ವಿರೋಧಿ ಬಣದ ರಾಜಕೀಯ ಗೊಂದಲವೂ ಈ ಬೆಳವಣಿಗೆಗಳಿಗೆ ಕಾರಣ ಎಂದು ವರದಿಯಲ್ಲಿದೆ’ ಎಂದು ಮೂಲಗಳು ಹೇಳಿವೆ.
‘ಕರಾವಳಿ ಭಾಗದಲ್ಲಿ ಧಾರ್ಮಿಕ ಪ್ರತ್ಯೇಕತೆಯ ಪ್ರಭಾವ ಹೆಚ್ಚಿದೆ. ಹಿಂದೂ– ಮುಸ್ಲಿಂ ಸಮುದಾಯದ ಯುವ ವರ್ಗ ಹಾಗೂ ಧಾರ್ಮಿಕ ಗುರುಗಳು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧರ್ಮದವರನ್ನು ಕೆರಳಿಸುವ ರೀತಿಯಲ್ಲಿ ಆಚರಣೆ ಮಾಡುವುದೂ ಕೆಲವು ಘಟನೆಗಳಿಗೆ ಕಾರಣ. ಧರ್ಮಾಂಧತೆಯ ಕಾರಣಕ್ಕೆ ಮತೀಯ ಗೂಂಡಾಗಿರಿ ಪದೇ ಪದೇ ನಡೆಯುತ್ತಿದೆ. ಇದರಿಂದ ಧಾರ್ಮಿಕ ಸಂಘರ್ಷ ಮತ್ತಷ್ಟು ಹೆಚ್ಚಿದೆ ಎಂದೂ ವರದಿಯಲ್ಲಿದೆ’ ಎಂದು ಗೊತ್ತಾಗಿದೆ.
ಕೆಲವು ಮಾಫಿಯಾಗಳು ಕರಾವಳಿಯನ್ನು ನಿಯಂತ್ರಿಸುತ್ತಿರುವುದೂ ಕೋಮು ದಳ್ಳುರಿ ಹೆಚ್ಚಲು ಕಾರಣವಾಗುತ್ತಿದೆ. ಡ್ರಗ್ಸ್, ಗಾಂಜಾ, ಮರಳು, ರೌಡಿಸಂ, ಜಾನುವಾರು ಸಾಗಣೆ ಮಾಫಿಯಾ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ. ಎರಡೂ ಧರ್ಮದವರಿಗೆ, ಸಂಘಟನೆಗಳಿಗೆ ಸ್ಥಳೀಯರ ಬೆಂಬಲದ ಜೊತೆ ಹೊರಗಿನ ಬೆಂಬಲವೂ ದೊರೆಯುತ್ತಿದೆ. ವಿದೇಶಗಳಿಂದಲೂ ಆರ್ಥಿಕ ನೆರವು ಸಿಗುತ್ತಿದೆ. ಪೊಲೀಸರ ನಿಷ್ಕ್ರಿಯತೆ ಕೂಡ ಘಟನೆ ಹೆಚ್ಚಲು ಕಾರಣವಾಗುತ್ತಿದೆ. ಜೊತೆಗೆ, ಕರಾವಳಿಯ ಘಟನೆ ಹಾಗೂ ಬೆಳವಣಿಗೆಗೆ ವ್ಯಾಪಕ ಪ್ರಚಾರ ಕೂಡ ಕಾರಣ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ಸಮಿತಿಯ ಸದಸ್ಯರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.