ಹುತಾತ್ಮ ಪೊಲೀಸರ ಕುಟುಂಬ ಸದಸ್ಯರೊಂದಿಗೆ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು. ಜಿ.ಪರಮೇಶ್ವರ, ಎಂ.ಎ.ಸಲೀಂ ಉಪಸ್ಥಿತರಿದ್ದರು – ಪ್ರಜಾವಾಣಿ ಚಿತ್ರಗಳು/ ರಂಜು ಪಿ.
ಬೆಂಗಳೂರು: ವಿಶೇಷ ಕಾರ್ಯಪಡೆ ರಚನೆಯಾದ ಬಳಿಕ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗದಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ. ಅದೇ ರೀತಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ನಗರದಲ್ಲಿ ಮಂಗಳವಾರ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ ಆಗಿರುವುದು ಎರಡು ದಿನಗಳ ಹಿಂದೆ ನಾನು ಅಲ್ಲಿಗೆ ಭೇಟಿ ನೀಡಿದಾಗ ಕಂಡು ಬಂತು. ಜಿಲ್ಲೆಯಲ್ಲಿ ಈಗ ಮೊದಲಿದ್ದ ವಾತಾವರಣ ಇಲ್ಲ’ ಎಂದು ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಆಗಬೇಕಿದೆ ಎಂದರು.
ಒಂದು ವರ್ಷದಲ್ಲಿ ರಾಜ್ಯದ ಎಂಟು ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಇವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಇವರನ್ನು ಸ್ಮರಿಸಿ, ವಂದಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
116 ಮಂದಿಗೆ ಅನುಕಂಪದ ಕೆಲಸ ನೀಡಿ ಆದೇಶ ಹೊರಡಿಸಲಾಗಿದೆ. ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರುಪಾವತಿ ವೆಚ್ಚವನ್ನು ವಾರ್ಷಿಕ ₹1 ಲಕ್ಷಗಳಿಂದ ₹1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು ₹1,000ಗಳಿಂದ ₹1,500ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹ ಸಚಿವ ಜಿ.ಪರಮೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.ಎ.ಸಲೀಂ ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಂಡವಾಳ ಹೆಚ್ಚು ಹರಿದು ಬಂದು ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆಯೂ ಬಗೆಹರಿಯಲಿದೆಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.