ADVERTISEMENT

ರೇಣುಕಸ್ವಾಮಿ ಹತ್ಯೆ | ದರ್ಶನ್‌ ಭೇಟಿಯಾಗಿಲ್ಲ, ಹಣ ಕೊಟ್ಟಿಲ್ಲ: ಕಾಶಿನಾಥಯ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 9:30 IST
Last Updated 16 ಜನವರಿ 2025, 9:30 IST
<div class="paragraphs"><p>ಕಾಶಿನಾಥಯ್ಯ</p></div>

ಕಾಶಿನಾಥಯ್ಯ

   

ಚಿತ್ರದುರ್ಗ: ‘ನಟ ದರ್ಶನ್‌ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ನಾವು ಭೇಟಿಯಾಗಿಲ್ಲ, ಅವರಿಂದ ಹಣ ಪಡೆದಿಲ್ಲ, ಅವರೂ ನಮ್ಮ ಬಳಿ ಬಂದಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸುದ್ದಿಗಳು ಹರಿದಾಡುತ್ತಿರುವುದು ನಮಗೆ ನೋವಾಗಿದೆ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಬೇಸರ ವ್ಯಕ್ತಪಡಿಸಿದರು.

‘ರೇಣುಕಸ್ವಾಮಿ ಕುಟುಂಬ ಸದಸ್ಯರಿಗೆ ದರ್ಶನ್‌ ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದಾರೆ, ಹೊಸ ಕಾರು ಖರೀದಿ ಮಾಡುತ್ತಿದ್ದಾರೆ ಎಂಬೆಲ್ಲಾ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನನಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಗ್ಗೆ ಏನೂ ಗೊತ್ತಿಲ್ಲ. ನಮ್ಮ ಸಂಬಂಧಿಕರು, ಹಿತೈಷಿಗಳು ಈ ಕುರಿತು ಕರೆ ಮಾಡಿ ಕೇಳುತ್ತಿದ್ದಾರೆ. ಇದರಿಂದ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಈ ರೀತಿ ತಪ್ಪು ಸುದ್ದಿಗಳನ್ನು ಹಾಕುತ್ತಿರುವ ವಿಘ್ನ ಸಂತೋಷಿಗಳಿಗೆ ಇಂತಹ ಸುದ್ದಿಗಳನ್ನು ಹರಡಿಸದಂತೆ ಕೈಮುಗಿದು ಬೇಡಿಕೊಳ್ಳುತ್ತೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ರೇಣುಕಸ್ವಾಮಿ ಬಳಸುತ್ತಿದ್ದ ಬೈಕ್‌ ರಿಪೇರಿ ಮಾಡಿಸಲೂ ನಮಗೆ ಸಾಧ್ಯವಾಗಿಲ್ಲ. ನಾವು ಹೊಸ ಕಾರು ಖರೀದಿಸಲು ಸಾಧ್ಯವೇ? ದಯವಿಟ್ಟು ನೋವಿನ ಮೇಲೆ ಮತ್ತೆ ಗಾಯ ಮಾಡಬೇಡಿ. ನಮ್ಮ ಸೊಸೆ, ಮೊಮ್ಮಗನ ಬದುಕು ಮುಂದೆ ಹೇಗೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸುದಕ್ಕಾಗಿ ಏನು ಮಾಡಬೇಕು ಎಂಬ ಬಗ್ಗೆ ನಾವು ಕಾನೂನು ತಜ್ಞರ ಜೊತೆ ಚರ್ಚಿಸುತ್ತೇವೆ’ ಎಂದರು.

‘ನಟ ದರ್ಶನ್‌ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆರೋಪಿಗಳು ಅಪರಾಧ ಮಾಡಿರುವುದು ಸತ್ಯವಾಗಿರುವ ಕಾರಣದಿಂದಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ನಾವು ಮನವಿ ಮಾಡಿರಲಿಲ್ಲ, ಆದರೂ ಸರ್ಕಾರ ಸ್ವಯಂ ಪ್ರೇರಣೆಯಿಂದ ಕಾನೂನು ಪ್ರಕ್ರಿಯೆ ಮುಂದುವರಿಸಿರುವುದಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ’ಎಂದರು.

ಶೀಘ್ರಗತಿ ನ್ಯಾಯಾಲಯ ರಚಿಸಿ: ಜಂಗಮ ಸಮುದಾಯದ ಮುಖಂಡ ಷಡಾಕ್ಷರಿ ಮಾತನಾಡಿ ‘ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ವಿಚಾರಣಾ ನ್ಯಾಯಾಲಯದಿಂದ ಶೀಘ್ರಗತಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಮರೆತು ಹೋಗುವ ಮೊದಲು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾದರೆ ಶೀಘ್ರಗತಿ ನ್ಯಾಯಾಲಯ ರಚನೆಯಾಗಬೇಕು’ ಎಂದರು.

ಅನುಕಂಪದ ನೌಕರಿ ಅಸಾಧ್ಯ: ಸ್ಪಷ್ಟನೆ

ರೇಣುಕಸ್ವಾಮಿ ಪತ್ನಿ ಸಹನಾಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿ ಕುಟುಂಬ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ ‘ಅನುಕಂಪದ ಮೇಲೆ ನೌಕರಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಜೊತೆಗೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ರೇಣುಕಾಸ್ವಾಮಿ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಕಾಶಿನಾಥಯ್ಯ ಶಿವನಗೌಡರ್‌ ‘ಸರ್ಕಾರದ ಸ್ಪಷ್ಟನೆ ನೋಡಿ ನಮಗೆ ನೋವಾಗಿದೆ. ಮುಂದೆ ನನ್ನ ಸೊಸೆ ಹಾಗೂ ಮೊಮ್ಮಗ ಬೀದಿಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಮರುಪರಿಶೀಲಿಸಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.