ಮೃತ ರೇಣುಕಾಸ್ವಾಮಿ, ನಟ ದರ್ಶನ್, ಪವಿತ್ರಾ ಗೌಡ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಎಂ. ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್ ರಾವ್ ಅವರಿಗೆ ಇಂದು (ಶುಕ್ರವಾರ) ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇದೇ 9ರಂದು ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನಿಯಮಿತ (ರೆಗ್ಯುಲರ್) ಜಾಮೀನು ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಸುದೀರ್ಘ ವಾದ-ಪ್ರತಿವಾದ ಆಲಿಸಿ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿದೆ.
ಎಲ್ಲರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದರು.
ಸೆಪ್ಟೆಂಬರ್ 24ರಂದು 16ನೇ ಆರೋಪಿಯಾದ ಕೇಶವಮೂರ್ತಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದೇ ದಿನ 15 ಹಾಗೂ 17ನೇ ಆರೋಪಿಗಳಾದ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಅವರಿಗೆ 57ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಮೂವರೂ ಆರೋಪಿಗಳು ತುಮಕೂರು ಕಾರಾಗೃಹದಲ್ಲಿ ಇದ್ದರು.
ಈ ಮೂವರು ದರ್ಶನ್ ಆಪ್ತರಿಂದ ತಲಾ ₹ 5 ಲಕ್ಷ ಪಡೆದುಕೊಂಡು, ತಾವೇ ರೇಣುಕಸ್ವಾಮಿ ಕೊಲೆ ಮಾಡಿರುವುದಾಗಿ ಠಾಣೆಗೆ ಬಂದು ಶರಣಾಗಿದ್ದರು.
ರೇಣುಕಸ್ವಾಮಿ ಕೊಲೆ ಪ್ರಕರಣದ 3ನೇ ಆರೋಪಿ ಪವನ್ ಕೆ. ಅಲಿಯಾಸ್ ಪುಟ್ಟಸ್ವಾಮಿ, 4ನೇ ಆರೋಪಿ ರಾಘವೇಂದ್ರ ಅಲಿಯಾಸ್ ನಾಗರಾಜ್, 8ನೇ ಆರೋಪಿ ರವಿಶಂಕರ್ ಅಲಿಯಾಸ್ ರವಿ 9ನೇ ಆರೋಪಿ ಧನರಾಜ್ ಅಲಿಯಾಸ್ ರಾಜು, 10ನೇ ಆರೋಪಿ ವಿನಯ್ ಅಲಿಯಾಸ್ ವೆಂಕಟರೆಡ್ಡಿ, 13ನೇ ಆರೋಪಿ ದೀಪಕ್ ಅವರಿಗೆ ಜಾಮೀನು ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.