ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಭಾನುವಾರ ರಾಜ್ಯಮಟ್ಟದ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರ ವಾದ್ಯತಂಡ ಆಕರ್ಷಕ ಪಥ ಸಂಚಲನ ನಡೆಸಿತು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು: ಭಯೋತ್ಪಾದಕರಿಂದ ಅಪಹರಣಗೊಂಡ ಬಸ್ಸಿನ ಪ್ರಯಾಣಿಕರನ್ನು ಪೊಲೀಸ್ ಗರುಡ ಪಡೆ ರಕ್ಷಣೆ ಮಾಡಿದ ಪರಿ, ಆ ಸಂದರ್ಭದಲ್ಲಿ ಶ್ವಾನದಳ ಪ್ರದರ್ಶಿಸಿದ ಸಾಹಸ ನೋಡುಗರನ್ನು ರೋಮಾಂಚನಗೊಳಿಸಿತು.
ಗಣರಾಜ್ಯೋತ್ಸವ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಭಾನುವಾರ ಭದ್ರತಾ ಭಯೋತ್ಪಾದಕ ನಿಗ್ರಹ ಕೇಂದ್ರದ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಮೈನವಿರೇಳಿಸುವಂತೆ ಅಣಕು ಪ್ರದರ್ಶನ ನಡೆಯಿತು.
ಬಸ್ ಅನ್ನು ಅಪಹರಣ ಮಾಡುವುದು, ಅದರ ರಕ್ಷಣೆಗೆ ಗರುಡ ಪಡೆ ಧಾವಿಸುವುದು, ಪಡೆಯ ವಿವಿಧ ವಾಹನಗಳು ಬಸ್ ಅನ್ನು ಸುತ್ತುವರಿದು ನಿಲ್ಲುವಂತೆ ಮಾಡುವುದು, ಶ್ವಾನದಳದ ಅರ್ಜುನ (ಜರ್ಮನ್ ಷೆಫರ್ಡ್ ತಳಿಯ ನಾಯಿ) ಹಾರಿ ಬಸ್‌ನ ಕಿಟಕಿಯಲ್ಲೇ ಒಳಗೆ ನುಗ್ಗಿ ಭಯೋತ್ಪಾದಕನನ್ನು ಹಿಡಿಯುವುದು, ಬಾಂಬ್ ನಿಷ್ಕ್ರಿಯಗೊಳಿಸುವುದು ಎಲ್ಲವೂ ಎವೆಯಿಕ್ಕದೇ ನೋಡುವಂತೆ ಮಾಡಿದವು.
ಲ್ಯಾನ್ಸ್ ಹವಲ್ದಾರ್ ತೇಜಿಂದರ್ ಸಿಂಗ್ ನೇತೃತ್ವದ 13 ಸೈನಿಕರು ಪಂಜಾಬ್ ಪರಂಪರೆ ಬಿಂಬಿಸುವ ಭಾಂಗ್ಡಾ ನೃತ್ಯ ಮಾಡಿ ಗಮನ ಸೆಳೆದರು. ನಾಯಕ್ ಅರ್ಷ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ನಡೆದ ‘ಗಟ್ಕಾ’ ಪ್ರದರ್ಶನವು ಪ್ರಾಚೀನ ಸಿಖ್ ಯುದ್ಧಕಲೆಯನ್ನು ನೆನಪಿಸಿತು. ಮೈಸೂರಿನ ಕೆಎಸ್‌ಆರ್‌ಪಿಯ ಶೈಲೇಂದ್ರ ಮತ್ತು ತಂಡದವರು ಕುದುರೆ ಏರಿ ವಿವಿಧ ಕಸರತ್ತು ನಡೆಸಿದರು. ಅತಿ ವೇಗದಲ್ಲಿ ಸಾಗುವಾಗ ನಿಗದಿತ ಪ್ರದೇಶಕ್ಕೆ ಈಟಿಯಲ್ಲಿ ಇರಿಯುವ ‘ಟೆಂಟ್ ಪೆಗ್ಗಿಂಗ್’ ಮನಮೋಹಕವಾಗಿತ್ತು.
4/8 ಗೂರ್ಖಾ ರೈಫಲ್ಸ್ ಯೋಧರು ನಾಯಕ್ ಸೋವಿತ್ ತಾಪಾ ಅವರ ನೇತೃತ್ವದಲ್ಲಿ ಪ್ರದರ್ಶಿಸಿದ ಗೂರ್ಖಾರ ಶೌರ್ಯವನ್ನು ಬಿಂಬಿಸುವ ‘ಖುಕ್ರಿ’ ನೃತ್ಯ ಜನರನ್ನು ಬೆರಗುಗೊಳಿಸಿತು.
ಭಾರತದ ಏಕತೆ ಸಾರುವ ‘ನಾವೆಲ್ಲರೂ ಒಂದೇ ನಾವು ಭಾರತೀಯರು’ ನೃತ್ಯವನ್ನು ಬೆಂಗಳೂರಿನ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಸುಮಾರು 800 ಮಕ್ಕಳು ಪ್ರದರ್ಶಿಸಿದರು. ಅಂಬೇಡ್ಕರ್ ಅನುಭವಿಸಿದ ಅವಮಾನ, ಸವಾಲುಗಳನ್ನು, ಅವರು ಮಾಡಿದ ಹೋರಾಟವನ್ನು ಬಿಂಬಿಸುವ ‘ಅರಿವೇ ಅಂಬೇಡ್ಕರ್’ ನೃತ್ಯ ರೂಪಕವನ್ನು ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 650 ಮಕ್ಕಳು ಪ್ರದರ್ಶಿಸಿ ಅಂಬೇಡ್ಕರ್ ಬಗ್ಗೆ ಅರಿವು ಮೂಡಿಸಿದರು.
ಆರಂಭದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು.
ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ನ ಯೋಧರು ಪಥಸಂಚಲನ ನಡೆಸಿದರು
ಗರುಡ ಪಡೆಯಿಂದ ಬಸ್ ರಕ್ಷಿಸುವ ಅಣಕು ಪ್ರದರ್ಶನ ರೋಮಾಂಚನಕಾರಿಯಾಗಿ ನಡೆಯಿತು
ಪಂಜಾಬ್‌ನ ಸೇನಾ ತಂಡದ ಯೋಧ ಬೆಂಕಿ ಉಗುಳುತ್ತಿರುವುದು
ಧ್ವಜಾರೋಹಣದ ನಂತರ ನಡೆದ ಆಕರ್ಷಕ ಪಥಸಂಚಲನ ಮಿಲಿಟರಿ ಬ್ಯಾಂಡ್ ಹಿಮ್ಮೇಳ ಗಮನ ಸೆಳೆದವು. ರಾಜ್ಯದ ಪೊಲೀಸರ ಜೊತೆಗೆ ಕೇರಳ ಪೊಲೀಸರೂ ಹೆಜ್ಜೆ ಹಾಕಿದರು. ಗೂರ್ಖಾ ರೈಫಲ್ಸ್‌ನವರು ಮೆರುಗು ಹೆಚ್ಚಿಸಿದರು. ಶ್ವಾನದಳದ ಪಥಸಂಚಲನ ಬೆರಗು ಮೂಡಿಸಿತು. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಎನ್.ಸಿ.ಸಿ ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಕವಾಯತು ಮತ್ತು ಬ್ಯಾಂಡ್‌ನ ಒಟ್ಟು 38 ತುಕಡಿಗಳಲ್ಲಿ ಸುಮಾರು 1150 ಮಂದಿ ಭಾಗವಹಿಸಿ ಕ್ರಮಬದ್ಧವಾಗಿ ಹೆಜ್ಜೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.