ADVERTISEMENT

ಗ್ರಾಚ್ಯುಟಿ ವಿಮಾ ನಿಯಮ ರದ್ದು ಕೋರಿಕೆ: ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:34 IST
Last Updated 25 ಅಕ್ಟೋಬರ್ 2024, 16:34 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024’ ಅನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ‘ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ’ದ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಪ್ರತಿವಾದಿಯಾದ ರಾಜ್ಯ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ಹೈಕೋರ್ಟ್‌ ವಕೀಲ ಬಿ.ಕೆ.ಪ್ರಶಾಂತ್ ವಕಾಲತ್ತು ವಹಿಸಿದ್ದಾರೆ.

ಏನಿದು ಅರ್ಜಿ?: ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು ‘ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024 ಜಾರಿಗೊಳಿಸಿ ರಾಜ್ಯ ಸರ್ಕಾರ 2024ರ ಜನವರಿ 10ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದಾರೆ.

ADVERTISEMENT

‘ಅಧಿಸೂಚನೆ ಜಾರಿಗೆ ಬಂದ 60 ದಿನಗಳಲ್ಲಿ ವಿಮೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬ ಸರ್ಕಾರದ ಗಡುವು ಸಂವಿಧಾನದ ಕಲಂ 14ರ ಸ್ಪಷ್ಟ ಉಲ್ಲಂಘನೆ ಆಗಲಿದೆ. ಸರ್ಕಾರದ ಅಧಿಸೂಚನೆ ಕಾನೂನಾತ್ಮಕ ದೋಷಗಳಿಂದ ಕೂಡಿದ್ದು, ವಿವೇಕ ಬಳಸದೆ ಅದನ್ನು ಜಾರಿಗೆ ತರಲಾಗಿದೆ. ಏಕಾಏಕಿ ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡರೆ ಅದು ಹೋಟೆಲ್‌ಗಳು ಹಾಗೂ ಇತರ ಕಿರು ಉದ್ಯೋಗದಾತರನ್ನು ಆರ್ಥಿಕ ಅಸ್ಥಿರತೆಗೆ ದೂಡಲಿದೆ. ಆದ್ದರಿಂದ, ಅಧಿಸೂಚನೆ ರದ್ದುಪಡಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.