ADVERTISEMENT

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ | ವಿಲೀನ ವಿಳಂಬ: ಸಂಶೋಧನೆಗೆ ಗ್ರಹಣ

ಚಂದ್ರಹಾಸ ಹಿರೇಮಳಲಿ
Published 8 ಜನವರಿ 2025, 23:58 IST
Last Updated 8 ಜನವರಿ 2025, 23:58 IST
ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ 
ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ    

ಬೆಂಗಳೂರು: ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳಾದರೂ ಸಂಶೋಧನಾ ಕಾರ್ಯಗಳೇ ಆರಂಭವಾಗಿಲ್ಲ.

ಮಹಾರಾಣಿ ವಿಜ್ಞಾನ ಕಾಲೇಜು, ವಿಎಚ್‌ಡಿ ಕೇಂದ್ರ ಗೃಹ ವಿಜ್ಞಾನ ಕಾಲೇಜು, ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸೇರಿ ಮೂರು ಮಹಿಳಾ ಕಾಲೇಜುಗಳನ್ನು ಸೇರಿಸಿ 2019ರಲ್ಲಿ ವಿಶ್ವವಿದ್ಯಾಲಯ ರಚಿಸಿದಾಗ ಪಿಎಚ್‌.ಡಿ. ಮಾರ್ಗದರ್ಶನಕ್ಕೆ ಅರ್ಹರಾದ 234 ಅಧ್ಯಾಪಕರು ಇದ್ದರು. ಅಂದಿನಿಂದ ಇಲ್ಲಿಯವರೆಗೂ ಒಬ್ಬ ವಿದ್ಯಾರ್ಥಿಗೂ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಪ್ರತಿಭಾವಂತ ಮಾವನಸಂಪನ್ಮೂಲ ವ್ಯರ್ಥವಾಗುತ್ತಿರುವುದಕ್ಕೆ ಅಧ್ಯಾಪಕರ ವಲಯವೂ ಆಕ್ಷೇಪ ವ್ಯಕ್ತಪಡಿಸಿದೆ.

ಉನ್ನತ ಶಿಕ್ಷಣ ನೀಡುವ ಆಯ್ದ ಅತ್ಯುತ್ತಮ ಸರ್ಕಾರಿ ಕಾಲೇಜುಗಳನ್ನು ಡೀಮ್ಡ್‌ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಭಾರತದ ಶಿಕ್ಷಣದ ಗುಣಮಟ್ಟವನ್ನು ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಕೇಂದ್ರ ಸರ್ಕಾರ 2009–10ನೇ ಸಾಲಿನಲ್ಲಿ ಅರ್ಜಿ ಆಹ್ವಾನಿಸಿತ್ತು. 

ADVERTISEMENT

ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಅದಕ್ಕೆ ಪೂರಕವಾದ ಪಠ್ಯಕ್ರಮ ರಚನೆ, ಅಧ್ಯಾಪಕರಿಗೆ ತರಬೇತಿ, ಹೊಸ ಬಗೆಯ ಕೋರ್ಸ್‌ಗಳ ರಚನೆ ಹಾಗೂ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಕಲಿಕೆಗೆ ನುರಿತ, ಅನುಭವಿ ಅಧ್ಯಾಪಕರನ್ನು ಬಳಸಿಕೊಳ್ಳುವುದು. ಕಾಲೇಜು ಕ್ಯಾಂಪಸ್‌ ಒಳಗೆ ಪದವಿ ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿಗಳನ್ನು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಲು ಆಯಾ ಕಾಲೇಜುಗಳಿಗೆ ಸ್ವಾಯತ್ತೆ ನೀಡುವುದು ಸರ್ಕಾರಿ ಡೀಮ್ಡ್‌ ವಿಶ್ವವಿದ್ಯಾಲಯಗಳ ಸ್ಥಾಪನೆಯ ಧ್ಯೇಯೋದ್ದೇಶವಾಗಿತ್ತು.

ಅಗತ್ಯ ಮೂಲಸೌಕರ್ಯ, ಶ್ರೇಷ್ಠ ಅಧ್ಯಾಪಕ ವೃಂದ ಸೇರಿದಂತೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್‌) ಉನ್ನತ ಗ್ರೇಡ್‌ ಪಡೆದ ದೇಶದ ಹಲವು ಕಾಲೇಜುಗಳು ವಿಶ್ವವಿದ್ಯಾಲಯದ ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಅರ್ಹತೆಯ ಆಧಾರದ ಮೇಲೆ ಮಹಿಳಾ ವಿದ್ಯಾರ್ಥಿಗಳನ್ನೇ ಒಳಗೊಂಡಿದ್ದ ಕಾಶ್ಮೀರ ಹಾಗೂ ಬೆಂಗಳೂರಿನ ಮಹಾರಾಣಿ ಕಾಲೇಜುಗಳಿಗೆ ಮಾತ್ರ ಕ್ಲಸ್ಟರ್‌ ವಿಶ್ವವಿದ್ಯಾಲಯದ ಸ್ಥಾನ ಸಿಕ್ಕಿತ್ತು. ರಾಜ್ಯ ಸರ್ಕಾರ 2018ರಲ್ಲಿ ಕಾಯ್ದೆ ರೂಪಿಸಿ, 2019ರಲ್ಲಿ ಅಸ್ತಿತ್ವಕ್ಕೆ ತಂದಿತ್ತು. ಆ ವರ್ಷ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ₹50 ಕೋಟಿ, ನಂತರ ₹20 ಕೋಟಿ ಬಿಡುಗಡೆಯಾಗಿತ್ತು. ರಾಜ್ಯ ಸರ್ಕಾರ ಪ್ರತಿ ವರ್ಷ ₹1.5 ಕೋಟಿ ನೀಡುತ್ತಿದೆ.

‘ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮದ ಪ್ರಕಾರ ಸಂಶೋಧನೆಗಳಿಗೆ ಅನುದಾನ ಪಡೆಯಲು 2ಎಫ್‌ ಮಾನ್ಯತೆ ಇರಬೇಕು. ಪಿಎಚ್‌.ಡಿ ಮಾರ್ಗದರ್ಶನ ಮಾಡಲು ಅರ್ಹತೆ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕರು ಇರಬೇಕು. ಸರ್ಕಾರ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸದ ಕಾರಣ 234 ಅರ್ಹ ಪ್ರಾಧ್ಯಾಪಕರಿದ್ದರೂ, ಸಂಶೋಧನಾ ಕಾರ್ಯ ಆರಂಭಿಸಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಕನ್ನಡ ಪ್ರಾಧ್ಯಾಪಕ ಕೆ.ವೈ. ನಾರಾಯಣಸ್ವಾಮಿ.

ವಿವಿ ಸ್ಥಾಪನೆಯ ನಂತರ ಕೃತಕ ಬುದ್ಧಿಮತ್ತೆ ಸೇರಿದಂತೆ ಹತ್ತು ಹಲವು ಹೊಸ ಬಗೆಯ ಕೋರ್ಸ್‌ಗಳು ಆರಂಭವಾಗಿವೆ. ಬಹುಬೇಡಿಕೆ ಇದ್ದು ಕಡಿಮೆ ಶುಲ್ಕಕ್ಕೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದರೆ ಸಂಶೋಧನೆಗಳು ಸ್ಥಗಿತವಾಗಿವೆ.
ಎಂ.ಎಸ್‌. ಆಶಾದೇವಿ ಪ್ರಾಧ್ಯಾಪಕಿ ಮಹಾರಾಣಿ ಕ್ಲಸ್ಟರ್‌ ವಿವಿ
ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆ ನೀಡುವ ಹಾಗೂ ಅಧ್ಯಾಪಕರನ್ನು ವಿಲೀನಗೊಳಿಸುವ ಪ್ರಕ್ರಿಯೆಯ ಕಡತವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ಶೀಘ್ರ ಜಾರಿಯಾಗಲಿದೆ
ಎಂ.ಎಸ್. ಶ್ರೀಕರ್‌ ಪ್ರಧಾನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ  

ವಿಲೀನ ಪ್ರಕ್ರಿಯೆಗೆ ಸರ್ಕಾರದ ನಿರಾಸಕ್ತಿ

ಮೂರು ಮಹಿಳಾ ಕಾಲೇಜುಗಳನ್ನು ಒಟ್ಟುಗೂಡಿಸಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಸ್ಥಾಪಿಸಿದ ನಂತರ ಕಾಲೇಜು ಶಿಕ್ಷಣ ಇಲಾಖೆ ಅಧೀನದಲ್ಲಿದ್ದ ಅಧ್ಯಾಪಕರನ್ನು ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಲೇ ಇಲ್ಲ.  ಅಧ್ಯಾಪಕರಿಗೆ ವಿಶ್ವವಿದ್ಯಾಲಯದಲ್ಲಿ ಉಳಿಯುವ ಅಥವಾ ಬೇರೆ ಕಾಲೇಜುಗಳಿಗೆ ವರ್ಗಾವಣೆ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕಿತ್ತು. ಆದರೆ ಇಚ್ಛೆ ದಾಖಲಿಸುವ ಪ್ರಕ್ರಿಯೆಗಳನ್ನೇ ಆರಂಭಿಸಲಿಲ್ಲ. ವಿಳಂಬವಾದ ಕಾರಣ ಈ ಐದು ವರ್ಷಗಳ ಅವಧಿಯಲ್ಲಿ ಹಲವರು ನಿವೃತ್ತರಾದರು. ಉಳಿದವರು ಕಾಲೇಜು ಶಿಕ್ಷಣ ಇಲಾಖೆಯಿಂದಲೇ ವೇತನ ಪಡೆಯುತ್ತಾ ವಿಶ್ವವಿದ್ಯಾಲಯದಲ್ಲೇ ಉಳಿದರು. 

ಕೋರ್ಟ್‌ ಮೊರೆ ಹೋದ ನಿವೃತ್ತರು

ಕಾಲೇಜು ಶಿಕ್ಷಣ ಇಲಾಖೆ ಅಧೀನದ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುವ ಅಧ್ಯಾಪಕರ ನಿವೃತ್ತಿ ವಯಸ್ಸು 60 ವರ್ಷಗಳು ವಿಶ್ವವಿದ್ಯಾಲಯದ ಅಧ್ಯಾಪಕರ ನಿವೃತ್ತಿ ವಯಸ್ಸು 62 ವರ್ಷಗಳು. ವಿಶ್ವವಿದ್ಯಾಲಯ ಸ್ಥಾನ ದೊರೆತ ನಂತರ ಮೂರು ಕಾಲೇಜುಗಳ ಅಧ್ಯಾಪಕರನ್ನು ಸರ್ಕಾರ ತಕ್ಷಣವೇ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಿದ್ದರೆ ಅವರ ನಿವೃತ್ತಿ ವಯಸ್ಸು ಎರಡು ವರ್ಷ ಹೆಚ್ಚಳವಾಗುತ್ತಿತ್ತು.  ಬಹುತೇಕರಿಗೆ 60 ವರ್ಷದ ನಂತರ ಕಾಲೇಜು ಶಿಕ್ಷಣ ಇಲಾಖೆ ನೀಡುತ್ತಿದ್ದ ವೇತನ ಸ್ಥಗಿತವಾಯಿತು. ಉಳಿದ ಎರಡು ವರ್ಷಗಳು ವೇತನವಿಲ್ಲದೇ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡಿದ್ದಾರೆ. ಅವರೆಲ್ಲ ವೇತನ ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ.

ಬೋಧಕೇತರರು ಪೂರಾ ಖಾಲಿ!
ವಿಶ್ವವಿದ್ಯಾಲಯ ಸ್ಥಾಪನೆಯಾದಾಗ 153 ಬೋಧಕೇತರ ಸಿಬ್ಬಂದಿ ಇದ್ದರು. ಅವರೆಲ್ಲರನ್ನೂ ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಬೇರೆಬೇರೆ ಪದವಿ ಕಾಲೇಜುಗಳಿಗೆ ವರ್ಗಾವಣೆ ಮಾಡಿತು. ಇಲ್ಲಿಯವರೆಗೂ ಹೊಸ ನೇಮಕಾತಿ ನಡೆದಿಲ್ಲ. ಹೊರಗುತ್ತಿಗೆ ಸಿಬ್ಬಂದಿಯೇ ಬೋಧಕೇತರ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.