ADVERTISEMENT

ಪಂಚಮಸಾಲಿಗಳಿಗೆ, ಕುರುಬರಿಗೆ ಮೀಸಲಾತಿ ಅಗತ್ಯ ಇದೆಯೇ? ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 17:45 IST
Last Updated 10 ಸೆಪ್ಟೆಂಬರ್ 2022, 17:45 IST
ಶಾಸಕ ಕೆ.ಎಸ್. ಈಶ್ವರಪ್ಪ
ಶಾಸಕ ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ:‘ಮೀಸಲಾತಿ ಇಂದು ದುರುಪಯೋಗವಾಗುತ್ತಿದೆ. ಪಂಚಮಸಾಲಿ ಸಮಾಜದವರು 2ಎ ಮೀಸಲಾತಿ ಬೇಕು ಎಂದು, ಕುರುಬರು ಎಸ್.ಟಿಗೆ ಸೇರಿಸಬೇಕು ಎಂದು, ಕೆಲವರು ಒಳಮೀಸಲಾತಿ ಬೇಕೆಂದು ಕೇಳುತ್ತಲೇ ಇದ್ದಾರೆ. ನಿಜವಾಗಿಯೂ ಪಂಚಮಸಾಲಿ ಸಮಾಜದವರಿಗೆ, ಕುರುಬರಿಗೆ ಮೀಸಲಾತಿ ಅಗತ್ಯ ಇದೆಯೇ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಇಲ್ಲಿನ ಜಿಲ್ಲಾಡಳಿತ ಶನಿವಾರ ಹಮ್ಮಿಕೊಂಡಿದ್ದ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀಸಲಾತಿ ಎಂಬುದು ಇಂದು ರಾಜಕೀಯ ಅಸ್ತ್ರವಾಗಿದೆ. ಮೀಸಲಾತಿ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಕೆಲವು ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮತ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಈಗ ಮೀಸಲಾತಿಯ ಪ್ರಶ್ನೆ ಏಳುತ್ತಿದೆ. ನನಗೂ ಬೇಕು, ನನ್ನ ಜಾತಿಗೂ ಬೇಕು ಎಂದು ಮೀಸಲಾತಿ ಕೇಳುವವರು ಹೆಚ್ಚುತ್ತಲೇ ಇದ್ದಾರೆ. ಯಾರಿಗೆ? ಎಷ್ಟು? ಯಾವಾಗ? ಮೀಸಲಾತಿ ಕೊಡಬೇಕು ಎಂಬುದೇ ಇಂದಿನ ಸಮಸ್ಯೆಯಾಗಿದೆ. ಡಾ.ಅಂಬೇಡ್ಕರ್ ಅವರು 10 ವರ್ಷದವರೆಗೆ ಮೀಸಲಾತಿ ಕೊಡಬೇಕು ಎಂದಿದ್ದರು. ಆದರೆ, 75 ವರ್ಷಗಳಾದರೂ ಮೀಸಲಾತಿಗಾಗಿ ಎಲ್ಲಾ ಸಮಾಜದವರು ಪಟ್ಟು ಹಿಡಿಯುತ್ತಿದ್ದಾರೆ. ಇದನ್ನು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದರು.

‘ಮೀಸಲಾತಿ ಸಿಗಬೇಕಾಗಿರುವುದು ಬಡವರಿಗೆ, ದೀನ ದಲಿತರಿಗೆ, ತುಳಿತಕ್ಕೆ ಒಳಗಾದವರಿಗೆ. ಹೀಗಾಗಿ ಮೀಸಲಾತಿ ಜಾತಿ ಸೂಚಕವಾಗಬಾರದು’ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.