ADVERTISEMENT

ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಅಸಂವಿಧಾನಿಕ ತೀರ್ಮಾನ: ಬಿ.ವೈ. ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 6:10 IST
Last Updated 16 ಮಾರ್ಚ್ 2025, 6:10 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಳಗಾವಿ: 'ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿರುವುದು ರಾಜ್ಯ ಸರ್ಕಾರದ ಅಸಂವಿಧಾನಿಕ ತೀರ್ಮಾನ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಬಗ್ಗೆ ‌ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಿರುವಾಗ, ಕಾಂಗ್ರೆಸ್ ಸರ್ಕಾರ ಧರ್ಮ-ಧರ್ಮಗಳ ಮಧ್ಯೆ ಕಂದಕ ನಿರ್ಮಿಸಲು ಹುನ್ನಾರ ನಡೆಸಿದೆ. ಓಲೈಕೆ ರಾಜಕಾರಣ ಎಷ್ಟರಮಟ್ಟಿಗೆ ಬಂದಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಬಿಜೆಪಿ ಇದನ್ನು ಬಲವಾಗಿ ಖಂಡಿಸಲಿದ್ದು, ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮಾಡಲಿದೆ' ಎಂದರು.

'ಬಿಜೆಪಿ ಹಾಗೂ ಜೆಡಿಎಸ್ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿವೆ. ಹಣಕಾಸಿನ ಮುಗ್ಗಟ್ಟು ಇದೆ ಎಂದು ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ಸರ್ಕಾರ ಕೈ‌ಹಾಕಿತ್ತು. ನಮ್ಮ ಹೋರಾಟದ ಹಿನ್ನೆಲೆಯಲ್ಲಿ ಒಂದು ಹೆಜ್ಜೆ ಹಿಂದಿಟ್ಟು, ತನ್ನ ನಿಲುವಿನಿಂದ ಹಿಂದಕ್ಕೆ ಸರಿದಿದೆ' ಎಂದು ತಿಳಿಸಿದರು.

ADVERTISEMENT

ಫೈನಾನ್ಸ್ ಕಂಪನಿಯವರಿಂದ ಬೆಳಗಾವಿಯಲ್ಲಿ ಸಾಲಗಾರರಿಗೆ ಕಿರುಕುಳ ಮುಂದುವರಿದಿರುವ ಕುರಿತ ಪ್ರಶ್ನೆಗೆ, 'ಫೈನಾನ್ಸ್ ಕಂಪನಿಗಳ ಕಿರುಕುಳ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಬಿಲ್ ಪಾಸ್ ಮಾಡಿದೆ. ಫೈನಾನ್ಸ್ ಕಂಪನಿಯವರ ಕಿರುಕುಳದಿಂದ ಈಗಾಗಲೇ ಸಾಕಷ್ಟು ಜನರು ಸಾವು- ನೋವು ಅನುಭವಿಸಿದ್ದಾರೆ. ನಾವೂ ಈ ವಿಚಾರವಾಗಿ ಸದನದಲ್ಲಿ ‌ಹೋರಾಟ ಮಾಡುತ್ತೇವೆ' ಎಂದರು.

'ಉತ್ತರ ಕರ್ನಾಟಕದಲ್ಲಿ ನೀರಾವರಿ ಯೋಜನೆಗೆ ಈ ಸರ್ಕಾರ ಯಾವುದೇ ಅನುದಾನ ನೀಡಿಲ್ಲ‌. ನಮ್ಮ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನೂ ತಡೆ‌ಹಿಡಿದಿದೆ. 'ಕಾಂಗ್ರೆಸ್ ನಡಿಗೆ ಕೃಷ್ಣಯ ಕಡೆಗೆ' ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಈಗ ಈ ವಿಚಾರವನ್ನೇ ಕಾಂಗ್ರೆಸ್ ನವರು ಮರೆತಿದ್ದಾರೆ. ಗ್ಯಾರಂಟಿ ಅನುಷ್ಠಾನ ಹಿನ್ನೆಲೆಯಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದ್ದು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಈ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಇದು ಕೇವಲ ಪೇಪರ್ ಟೈಗರ್ ಸರ್ಕಾರ' ಎಂದು ಲೇವಡಿ ಮಾಡಿದರು.

'ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು, ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರದಿಂದ ಹಣ ಬರುತ್ತಿಲ್ಲ ಎಂದು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಲಾಗಿದೆ. ಈ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ' ಎಂದರು.

'ಬೇಸಿಗೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಲಿದೆ. ಆದರೆ, ಆ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ' ಎಂದು ದೂರಿದರು.

‘ಕಿಡಿಗೇಡಿಗಳಿಗೆ ಕಡಿವಾಣ ಹಾಕಲಿ’

ಎಂಇಎಸ್ ನಿಂದ ಬೆಳಗಾವಿಯಲ್ಲಿ ಪುಂಡಾಟ ಮುಂದುವರಿದ ಕುರಿತ ಪ್ರಶ್ನೆಗೆ, 'ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರು ಅನ್ಯೋನ್ಯತೆಯಿಂದ ಇದ್ದಾರೆ. ಯಾರೋ ಕೆಲವು ಕಿಡಿಗೇಡಿಗಳು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಇಂಥ ಕಿಡಿಗೇಡಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು' ಎಂದರು.

'ಬೆಳಗಾವಿಯಲ್ಲಿ ಮೇಯರ್ ಆಗಿ ಬಿಜೆಪಿಯ ಮಂಗೇಶ ಪವಾರ್, ಉಪಮೇಯರ್ ಆಗಿ ವಾಣಿ ಜೋಶಿ ಆಯ್ಕೆಯಾಗಿದ್ದಾರೆ. ಅವರಿಬ್ಬರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಪರ ಕೆಲಸ‌ ಮಾಡಲಿ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.