ಬೆಂಗಳೂರು: ‘ಬಡವರಿಗೆ ನೀಡುವ ಮನೆಗಳಿಗೆ ಹಣ ಪಡೆದು ಬದುಕುವ ದರಿದ್ರ ಸ್ಥಿತಿ ಬಂದಿಲ್ಲ. ಆರೋಪ ಸಾಬೀತು ಮಾಡಿದರೆ 24 ಗಂಟೆಗಳ ಒಳಗೆ ರಾಜೀನಾಮೆ ನೀಡುವೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಡವರು ವಾಸಿಸುವ ಮನೆಗಳಿಗೆ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಹಣ ಪಡೆದವರು ಹುಳು ಬಿದ್ದು ಸಾಯುತ್ತಾರೆ. ಸರ್ಕಾರ ಅಂತಹ ಕೆಲಸಕ್ಕೆ ಅವಕಾಶ ನೀಡುವುದಿಲ್ಲ. ಹಾಗೆ ಮಾಡಿದ್ದರೆ ಮುಖ್ಯಮಂತ್ರಿ ಕೇಳುವುದಕ್ಕೂ ಮುಂಚೆಯೇ ರಾಜೀನಾಮೆ ನೀಡುತ್ತಿದ್ದೆ’ ಎಂದರು.
‘ಹಿರಿಯ ಶಾಸಕ ಬಿ.ಆರ್. ಪಾಟೀಲ ಅವರೂ ಸಹ ಸಚಿವರು ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿಲ್ಲ. ಅವರು ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿ.ಆರ್. ಪಾಟೀಲ ಅವರ ಜತೆಯೂ ಚರ್ಚೆ ನಡೆಸಲಾಗುವುದು. ಪಂಚಾಯಿತಿ ಮಟ್ಟದಲ್ಲಿ ಯಾರಾದರೂ ಹಣ ಪಡೆದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಲಿ. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಲಿ’ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ. ಪ್ರವಾಸದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬಂದ ತಕ್ಷಣ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಂಡಿದ್ದೇನೆ’ ಎಂದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರು ರಾಜೀನಾಮೆ ನೀಡಬೇಕು ಎಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಅವರಿಗೆ ವಾಸ್ತವ ಬಗ್ಗೆ ಮಾಹಿತಿ ಇಲ್ಲ. ಮನೆ ಹಂಚಿಕೆ ವಿಚಾರದಲ್ಲಿ ಇಲಾಖೆಯ ಪಾತ್ರವೇ ಇರುವುದಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ. ಶಾಸಕರ ಪತ್ರದ ಆಧಾರದಲ್ಲೇ ಮನೆ ಹಂಚಿಕೆ ಮಾಡಲಾಗುವುದು. ಆಳಂದ ಕ್ಷೇತ್ರಕ್ಕೂ ಬಿ.ಆರ್. ಪಾಟೀಲ ಅವರ ಪತ್ರದ ಆಧಾರದಲ್ಲೇ 950 ಮನೆಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ರಾಜ್ಯದಲ್ಲಿ ಒಟ್ಟು 14 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. 9 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. ಶಾಸಕರ ಬೇಡಿಕೆಯಂತೆ ಇನ್ನೂ 3.5 ಲಕ್ಷ ಮನೆಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗೆ ಹೇಳಿದ್ದೆ. ಅವರೂ ಒಪ್ಪಿಕೊಂಡಿದ್ದಾರೆ. ₹1.20 ಲಕ್ಷದ ಬದಲು ₹3.50 ಲಕ್ಷ ನೀಡಲು ಒಪ್ಪಿಗೆ ನೀಡಿದ್ದಾರೆ. ಆದರೆ, ಆರ್ಥಿಕ ಇಲಾಖೆ ಅನುಮತಿ ಸಿಕ್ಕಿಲ್ಲ’ ಎಂದರು.
ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಡವರಿಗೆ ಜಿಎಸ್‌ಟಿ ಹಾಕಬೇಡಿ ಎಂದು ಕೇಂದ್ರಕ್ಕೆ ಒತ್ತಾಯ ಮಾಡಲಿ. ₹1.5 ಲಕ್ಷ ಕೇಂದ್ರದಿಂದ ಬರುತ್ತದೆ. ಅದಕ್ಕೆ ಜಿಎಎಸ್‌ಟಿ ಹಾಕಿ ಮತ್ತೆ ₹1.3 ಲಕ್ಷ ವಾಪಸ್ ಪಡೆಯುತ್ತಾರೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ₹9,500 ಕೋಟಿ ಫಲಾನುಭವಿಗಳ ಹಣ ಬರಬೇಕಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.