ADVERTISEMENT

ಅರ್ಧ ಯುದ್ಧ ಮುಗಿದಿದೆ, ಇನ್ನರ್ಧ ಬಾಕಿ: ಬಿಜೆಪಿ

ಶಾಸಕರ ರಾಜೀನಾಮೆಗೆ ಇಂದು ಮುಹೂರ್ತ ನಿಗದಿ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 20:00 IST
Last Updated 18 ಜನವರಿ 2019, 20:00 IST
   

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಶಾಸಕರನ್ನು ಚಕ್ಕರ್‌ ಹಾಕಿಸುವಲ್ಲಿ ಯಶಸ್ವಿಯಾಗುವ ಮೂಲಕ ಸರ್ಕಾರ ಕೆಡಹುವ ಯತ್ನದಲ್ಲಿ ಅರ್ಧ ಯುದ್ಧ ಗೆದ್ದಂತಾಗಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಕರೆಯುವ ಮೂಲಕ ಬಿಜೆಪಿ ತಂತ್ರಕ್ಕೆ ಸಡ್ಡು ಹೊಡೆಯುವ ಪ್ರತಿತಂತ್ರವನ್ನು ಕಾಂಗ್ರೆಸ್‌ ಹೆಣೆದಿತ್ತು. ಈ ಬೆಳವಣಿಗೆ ಮಧ್ಯೆಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಇಡೀ ದಿನ ಪಕ್ಷದ ನಾಯಕರ ಜತೆ ಸರಣಿ ಸಭೆಗಳನ್ನು ನಡೆಸಿದರು. ಸರ್ಕಾರ ಪತನಗೊಳಿಸಲು ಇಡಬೇಕಾದ ಹೆಜ್ಜೆಗಳ ಕುರಿತು ಆಪ್ತರ ಜತೆ ಪ್ರತ್ಯೇಕವಾಗಿ ಸಮಾಲೋಚನೆಯನ್ನೂ ನಡೆಸಿದರು ಎಂದು ಮೂಲಗಳು ಹೇಳಿವೆ.

16 ಶಾಸಕರು ಸಂಪರ್ಕದಲ್ಲಿ: ಈಗಾಗಲೇ ಇಬ್ಬರು ಪಕ್ಷೇತರ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ನಾಲ್ವರೂ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ನ 14ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ಇವರೆಲ್ಲರನ್ನೂ ಹಿಡಿದಿಟ್ಟುಕೊಂಡು ಸರ್ಕಾರ ಬೀಳಿಸುವ ಬಗ್ಗೆ ಸಭೆಯಲ್ಲಿ ಗಹನ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಶಾಸಕರನ್ನು ಬೆದರಿಸಿ ಹಿಡಿದಿಟ್ಟುಕೊಳ್ಳುವುದಕ್ಕಾಗಿ ಕಾಂಗ್ರೆಸ್ ಸಭೆ ಹಮ್ಮಿಕೊಂಡಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಲಾಗಿತ್ತು. ತಾವು ಬಿಜೆಪಿ ಜತೆಗಿಲ್ಲ; ಕಾಂಗ್ರೆಸ್ ಜತೆಗಿದ್ದೇವೆ ಎಂದು ತೋರಿಸಿಕೊಂಡು ನಾಯಕರ ದಿಕ್ಕು ತಪ್ಪಿಸುವ ಸಲುವಾಗಿ ಈ ಆಟ ಆಡಲಾಯಿತು. ರಾಜೀನಾಮೆಗೆ ಕಾಲ ಪಕ್ವವಾದ ಕೂಡಲೇ ಭಿನ್ನಮತೀಯ ಶಾಸಕರು ಕಾಂಗ್ರೆಸ್ ತೊರೆಯಲಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

‘ಶಾಸಕರಿಂದ ಯಾವಾಗ ರಾಜೀನಾಮೆ ಕೊಡಿಸಬೇಕು ಎಂದು ಶನಿವಾರ ಸಂಜೆಯೊಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. 2–3 ದಿನದೊಳಗೆ ಸರ್ಕಾರ ಪತನದ ಹಾದಿ ತೆರೆದುಕೊಳ್ಳಲಿದೆ’ ಎಂದೂ ಅವರು ಹೇಳಿದರು.

ಗುರುಗ್ರಾಮದಲ್ಲೇ ವಾಸ್ತವ್ಯ: ‘ಆಪರೇಷನ್ ಕಮಲ’ ಮುಗಿಯುವವರೆಗೆ ಬಿಜೆಪಿ ಶಾಸಕರನ್ನು ಗುರುಗ್ರಾಮದಲ್ಲೇ ಇರಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಐಟಿಸಿ ಭಾರತ್ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರ ಪೈಕಿ 23 ಜನ ಬೇರೊಂದು ಹೋಟೆಲ್‌ಗೆ ವಾಸ್ತವ್ಯ ಬದಲಿಸಿದರು. ಕೊಠಡಿ ಕೊರತೆ ಇರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕರ ಸಭೆ ಯಶಸ್ವಿಯಾಗಿದ್ದರೆ ಶಾಸಕರೆಲ್ಲರೂ ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ, ಶಾಸಕರು ಗೈರಾಗಿದ್ದರಿಂದ, ಮೊದಲ ಹಂತದ ಯಶಸ್ಸು ಸಿಕ್ಕಿದೆ ಎಂದು ನಾಯಕರು ಭಾವಿಸಿದ್ದಾರೆ. ಹೀಗಾಗಿ ಇನ್ನೂ ನಾಲ್ಕು ದಿನ ಗುರು
ಗ್ರಾಮದಲ್ಲೇ ಇರಲಿದ್ದಾರೆ ಎನ್ನಲಾಗಿದೆ.

ಪ್ರತಿ ಆಪರೇಷನ್‌ಗೆ ‘ಮಿತ್ರ’ರ ತಯಾರಿ

ಗುರುಗ್ರಾಮದ ರೆಸಾರ್ಟ್‌ನಿಂದ ಹೊರಬರುತ್ತಿದ್ದಂತೆ ಕನಿಷ್ಠ 5ರಿಂದ 6 ಬಿಜೆಪಿ ಶಾಸಕರ ರಾಜೀನಾಮೆ ಕೊಡಿಸಲು ಜೆಡಿಎಸ್‌–ಕಾಂಗ್ರೆಸ್‌ ನಾಯಕರು ತಯಾರಿ ನಡೆಸಿದ್ದಾರೆ.

‘ಆಪರೇಷನ್ ಕಮಲ’ದ ಆತಂಕ ತಂದೊಡ್ಡುತ್ತಿರುವ ಬಿಜೆಪಿ ನಾಯಕರಿಗೆ ಪಾಠ ಕಲಿಸಬೇಕಾದರೆ ಅವರ ಬಲವನ್ನು ಕುಗ್ಗಿಸಬೇಕು ಎಂಬುದು ನಾಯಕರ ಅಭಿಮತ.

‘ಆಪರೇಷನ್‌ ಕೈ–ದಳ’ಕ್ಕೆ ಗುರುತಿಸಿರುವವರ ಪಟ್ಟಿಯಲ್ಲಿ ವಿ. ಸೋಮಣ್ಣ (ಗೋವಿಂದರಾಜನಗರ), ಗೂಳಿಹಟ್ಟಿ ಶೇಖರ್‌ (ಹೊಸದುರ್ಗ), ಪ್ರೀತಂ(ಹಾಸನ), ಕೆ.ಪೂರ್ಣಿಮಾ (ಹಿರಿಯೂರು), ರಾಜೂಗೌಡ(ಸುರಪುರ) ಅವರಿದ್ದಾರೆ.ಈ ಕುರಿತು ಗಂಭೀರ ಚರ್ಚೆ ನಡೆದಿದ್ದು, ಶಾಸಕರನ್ನು ಸಂಪರ್ಕಿಸಲಾಗಿದೆ. ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸಿದರೆ ಆಡಳಿತ ಪಕ್ಷವಾಗಿ ನಾವೂ ಮುಂದುವರಿಯಬೇಕಾಗುತ್ತದೆ’ ಎಂದು ಜೆಡಿಎಸ್‌ ನಾಯಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.