ADVERTISEMENT

ಯಡಿಯೂರಪ್ಪಗೆ ಬೆಣ್ಣೆ, ಉತ್ತರ ಕರ್ನಾಟಕಕ್ಕೆ ಮಜ್ಜಿಗೆ: ಯತ್ನಾಳ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 13:17 IST
Last Updated 24 ಡಿಸೆಂಬರ್ 2023, 13:17 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಕಲಬುರಗಿ: ‘ಉಪಾಧ್ಯಕ್ಷ, ಕಾರ್ಯದರ್ಶಿಯಂತಹ ಪಾಲ್ತು ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ಕೊಟ್ಟು ವಿಧಾನಸಭೆ ಪ್ರತಿ ಪಕ್ಷ ನಾಯಕ, ಅಧ್ಯಕ್ಷರಂತಹ ಒಳ್ಳೆಯ ಸ್ಥಾನಗಳನ್ನು ದಕ್ಷಿಣಕ್ಕೆ ಕೊಡುತ್ತಾರೆ. ಒಂದು ರೀತಿಯಲ್ಲಿ ಇದು ಬಿ.ಎಸ್. ಯಡಿಯೂರಪ್ಪಗೆ ಬೆಣ್ಣೆ, ಉತ್ತರ ಕರ್ನಾಟಕಕ್ಕೆ ಮಜ್ಜಿಗೆ ಕೊಟ್ಟಂತೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ರಾಜ್ಯ ಘಟಕದ ಪುನರ್‌ ರಚನೆ ಬಗ್ಗೆ ಅಸಮಾಧಾನ ಹೊರಹಾಕಿದರು.

ಇಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನವನ್ನು ಯಡಿಯೂರಪ್ಪ ಶಿಷ್ಯ ಎನ್. ರವಿಕುಮಾರಗೆ ಕೊಟ್ಟು, ಉತ್ತರ ಕರ್ನಾಟಕದವರಿಗೂ ಆದ್ಯತೆ ಕೊಟ್ಟಿದ್ದೇವೆ ಎನ್ನುತ್ತಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ’ ಎಂದರು.

‘ವಿಜಯೇಂದ್ರ ಅವರು ತಾವು ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳನ್ನು ಗೆದ್ದು ತರಬೇಕು. 27 ಸ್ಥಾನಗಳು ತಂದರೂ ನಡೆಯಲ್ಲ. ಲೋಕಸಭೆ ಚುನಾವಣೆಯ ಬಳಿಕ ಮಧ್ಯಪ್ರದೇಶ ಮತ್ತು ರಾಜಸ್ಥಾನ ಮಾದರಿಯಲ್ಲಿ ಎಲ್ಲರನ್ನೂ ತೆಗೆದು ಹಾಕುತ್ತಾರೆ’ ಎಂದು ಎಚ್ಚರಿಸಿದರು.

ADVERTISEMENT

‘ಕಾಂಗ್ರೆಸ್‌ನ ಸುವರ್ಣ ಯುಗ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಿ ಮಾಡಬೇಕಿತ್ತು. ಆದರೆ, ಮಾಡಲಿಲ್ಲ. ದಲಿತರನ್ನು ತಪ್ಪು ದಾರಿಗೆ ಎಳೆಯಲು ಈಗ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಎಂತೆಂಥವರನ್ನೂ ಸಿ.ಎಂ ಮಾಡಿದರು. ಖರ್ಗೆ ಅವರನ್ನು ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‌‘ಸಿ.ಎಂ ಸಿದ್ದರಾಮಯ್ಯ ಅವರಿಗೆ ಅರಿವು– ಮರೆವು ಶುರುವಾಗಿದೆ. ಮೊನ್ನೆ ಹಿಜಾಬ್ ನಿಷೇಧ ವಾಪಸ್ ಎಂದಿದ್ದರು. ಈಗ ಬೇರೆಯದ್ದೆ ಮಾತಾಡುತ್ತಿದ್ದಾರೆ. ಹಿಜಾಬ್ ಧರಿಸಿ ಎಂದರೆ, ನಾವು ನಮ್ಮ ಮಕ್ಕಳಿಗೆ ಕೇಸರಿ ಶಾಲು ಕೊಟ್ಟು ಕಳುಹಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.