ADVERTISEMENT

ರಾಜ್ಯ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ: ಪತ್ನಿ ಮೇಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 13:30 IST
Last Updated 20 ಏಪ್ರಿಲ್ 2025, 13:30 IST
<div class="paragraphs"><p>ಓಂ ಪ್ರಕಾಶ್</p></div>

ಓಂ ಪ್ರಕಾಶ್

   

ಬೆಂಗಳೂರು: ಬೆಂಗಳೂರು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ (68) ಅವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ.

ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಅವರ ಮನೆಯಲ್ಲೇ ಭಾನುವಾರ ಸಂಜೆ ಕೃತ್ಯ ನಡೆದಿದ್ದು, ಪ್ರಕರಣದ ಸಂಬಂಧ ಮೃತರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಪತಿ ಮೃತಪಟ್ಟಿರುವುದಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಪತ್ನಿ ಪಲ್ಲವಿ, ಪೊಲೀಸರು ಮನೆಗೆ ತಲುಪುವಷ್ಟರಲ್ಲಿ ಮನೆಯ ಮೂರನೇ ಮಹಡಿಯಲ್ಲಿನ ಕೊಠಡಿ ಸೇರಿಕೊಂಡಿದ್ದರು. ಮಗಳೊಂದಿಗೆ ಕೊಠಡಿಯ ಬಾಗಿಲು ಹಾಕಿಕೊಂಡಿದ್ದು, ಹೊರಬರಲು ನಿರಾಕರಿಸುತ್ತಿದ್ದರು. ಪ್ರಾಥಮಿಕ ತನಿಖೆ ಪ್ರಕಾರ ಪತ್ನಿ, ಮಗಳು ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಖಾರದ ಪುಡಿ, 2 ಚಾಕು ವಶಕ್ಕೆ

ಓಂ ಪ್ರಕಾಶ್‌ ಅವರ ಕೊಲೆಗೆ ಬಳಸಿರುವ 2 ಚಾಕು ಮತ್ತು ಮೃತದೇಹದ ಪಕ್ಕದಲ್ಲಿದ್ದ ಖಾರದಪುಡಿಯ ಬಾಟಲಿಯನ್ನು ಪೊಲೀಸರು ಸ್ಥಳ ಮಹಜರು ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ.

ಓಂ ಪ್ರಕಾಶ್‌ ಅವರ ಕುಟುಂಬ ಎಚ್‌ಎಸ್‌ಆರ್‌ ಬಡಾವಣೆ ಯಲ್ಲಿನ ನೆಲ ಮಹಡಿಯೂ ಸೇರಿದಂತೆ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿತ್ತು. ನೆಲ ಮಹಡಿಯಲ್ಲಿ ಓಂ ಪ್ರಕಾಶ್‌ ಮತ್ತು ಪತ್ನಿ ಪಲ್ಲವಿ ವಾಸವಿದ್ದರು. ಮೊದಲ ಮಹಡಿಯಲ್ಲಿ ಮಗ ಮತ್ತು ಸೊಸೆ ವಾಸಿಸುತ್ತಿದ್ದರು. ಎರಡು ಮತ್ತು ಮೂರನೇ ಮಹಡಿಯಲ್ಲಿ ಮಗಳು ಕೃತಿ ನೆಲಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪತ್ನಿ ಕೊಲೆಗೆ ಯತ್ನ?

‘ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪತಿ ಓಂ ಪ್ರಕಾಶ್ ಪದೇ ಪದೇ ಪಿಸ್ತೂಲ್ ತಂದು, ನನ್ನನ್ನು ಹಾಗೂ ಮಗಳನ್ನು ಶೂಟ್ ಮಾಡುವುದಾಗಿ ಬೆದರಿಸುತ್ತಿದ್ದರು. ಭಾನುವಾರ ಸಹ ಬೇರೆ ಬೇರೆ ವಿಚಾರಕ್ಕೆ ಗಲಾಟೆ ಆಯಿತು. ಗಲಾಟೆ ವಿಕೋಪಕ್ಕೆ ತಿರುಗಿ, ನಮ್ಮ ಕೊಲೆಗೆ ಯತ್ನಿಸಿದರು. ಆಗ ಅವರ ಮುಖಕ್ಕೆ ಖಾರದ ಪುಡಿ ಎರಚಿದೆವು, ಅಡುಗೆ ಎಣ್ಣೆ ಸುರಿದೆವು. ಬಳಿಕ ಕೈ–ಕಾಲು ಕಟ್ಟಿಹಾಕಿ, ಅಡುಗೆ ಮನೆಯ ಚಾಕುವಿನಿಂದ ಚುಚ್ಚಲಾಯಿತು. ತೀವ್ರ ರಕ್ತಸ್ರಾವದಿಂದ ಪತಿ ಮೃತಪಟ್ಟರು’ ಎಂದು ಪಲ್ಲವಿ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯಾರನ್ನೂ ಬಂಧಿಸಿಲ್ಲ: ವಿಕಾಸ್

‘ನಿವೃತ್ತ ಅಧಿಕಾರಿಯ ಕೊಲೆಗೆ ಹರಿತವಾದ ಆಯುಧ ಬಳಸಲಾಗಿದೆ. ಹೆಚ್ಚು ರಕ್ತ ಅವರ ದೇಹದಿಂದ ಹರಿದಿದೆ. ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದು, ಕೃತ್ಯಕ್ಕೆ ಇದೇ ಆಯುಧ ಬಳಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆ ನಡೆದ ವೇಳೆ ಮೂವರು ಇದ್ದರು ಎಂಬುದು ಗೊತ್ತಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್‌ ವಿಕಾಸ್‌ ಕುಮಾರ್‌ ವಿಕಾಸ್‌ ತಿಳಿಸಿದರು.

‘ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಯಾರನ್ನೂ ಬಂಧಿಸಿಲ್ಲ. ಕುಟುಂಬದ ಸದಸ್ಯರ ಹೇಳಿಕೆ ಪಡೆದುಕೊಳ್ಳ ಲಾಗುತ್ತಿದೆ. ಮೃತರ ಪುತ್ರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ಕೈಗೊಳ್ಳಲಾಗುವುದು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವರದಿ ಬಂದ ಬಳಿಕ ಮತ್ತಷ್ಟು ವಿಷಯ ಗೊತ್ತಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.