ADVERTISEMENT

ಮಂತ್ರಿ ಡೆವಲಪರ್ಸ್‌ ಸಮೂಹದ ಬ್ಯುಯಾಂತ್‌ ಕಂಪನಿಗೆ ಆಡಳಿತಾಧಿಕಾರಿ ನೇಮಿಸಿದ NCLT

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 6:54 IST
Last Updated 27 ಜೂನ್ 2022, 6:54 IST
   

ಬೆಂಗಳೂರು: ಮಂತ್ರಿ ಡೆವಲಪರ್ಸ್‌ ಸಮೂಹದ ಬ್ಯುಯಾಂತ್‌ ಟೆಕ್ನಾಲಜಿ ಕಾನ್‌ಸ್ಟೆಲ್ಲೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಆಡಳಿತಾಧಿಕಾರಿಯನ್ನಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆನಂದ ಬೈರಾ ರೆಡ್ಡಿ ಅವರನ್ನು ನೇಮಿಸಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಶನಿವಾರ ಆದೇಶ ಹೊರಡಿಸಿದೆ.

ಈಗಿನ ಬ್ಯುಯಾಂತ್‌ ಟೆಕ್ನಾಲಜಿ ಕಾನ್‌ಸ್ಟೆಲ್ಲೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಈ ಹಿಂದೆ ಮಂತ್ರಿ ಟೆಕ್ನಾಲಜಿ ಕಾನ್‌ಸ್ಟೆಲ್ಲೇಷನ್ಸ್‌ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು. ಈ ಹಿಂದೆ ಸೆಂಟ್ರಾ ಇನ್ಫೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಹೆಸರು ಹೊಂದಿದ್ದ ಈಗಿನ ವಾಟರ್‌ವಾಕ್‌ ಅಪಾರ್ಟ್‌ಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌, ಬ್ಯುಯಾಂತ್‌ನಲ್ಲಿ ಶೇಕಡ 50.23ರಷ್ಟು ಪಾಲು ಹೊಂದಿದೆ. ಮಾರಿಷಿಯಸ್‌ನಲ್ಲಿರುವ ಎರಡು ಹಾಗೂ ಸಿಪ್ರಸ್‌ನಲ್ಲಿರುವ ಎರಡು ಕಂಪನಿಗಳ ಮಾಲೀಕತ್ವ ಹೊಂದಿರುವ ಕ್ಸಾಂಡರ್‌ ಸಮೂಹ ಶೇ 49.77ರಷ್ಟು ಪಾಲು ಹೊಂದಿದೆ. ಬ್ಯುಯಾಂತ್‌ ಕಂಪನಿ ಆಡಳಿತದ ವಿಚಾರದಲ್ಲಿ ವಾಟರ್‌ವಾಕ್‌ ಕಂಪನಿ ಹಾಗೂ ಕ್ಸಾಂಡರ್‌ ಕಂಪನಿ ಸಮೂಹದ ನಡುವೆ ಸಂಘರ್ಷ ಉಂಟಾಗಿತ್ತು. ವಾಟರ್‌ವಾಕ್‌ ಕಂಪನಿ ಪ್ರಮುಖ ಪಾಲುದಾರರಾಗಿರುವ ಮಂತ್ರಿ ಡೆವಲಪರ್ಸ್‌ ನಿರ್ದೇಶಕ ಸುಶೀಲ್‌ ಪಾಂಡುರಂಗ ಮಂತ್ರಿ ಮತ್ತು ಇತರರು ಕ್ಸಾಂಡರ್‌ ಸಮೂಹವೂ ಸೇರಿ ಬ್ಯುಯಾಂತ್‌ ಕಂಪನಿ ಆಡಳಿತ ಮಂಡಳಿ ವಿರುದ್ಧ ದಾವೆ ಹೂಡಿದ್ದರು.

ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಆಲಿಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಬೆಂಗಳೂರು ಪೀಠದ ನ್ಯಾಯಾಂಗ ಸದಸ್ಯ ಅಜಯ್‌ ಕುಮಾರ್‌ ವಾತ್ಸವಾಯಿ ಮತ್ತು ತಾಂತ್ರಿಕ ಸದಸ್ಯ ಮನೋಜ್‌ ಕುಮಾರ್‌ ದುಬೆ ಅವರನ್ನೊಳಗೊಂಡ ಪೀಠ, ಆನಂದ ಬೈರಾ ರೆಡ್ಡಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಬ್ಯುಯಾಂತ್‌ ಕಂಪನಿಯ ಸಂಪೂರ್ಣ ಆಡಳಿತ ನಿರ್ವಹಣೆ ಅಧಿಕಾರವನ್ನು ಆಡಳಿತಾಧಿಕಾರಿಗೆ ನೀಡಲಾಗಿದೆ. ಅಗತ್ಯವಿರುವ ಸಿಬ್ಬಂದಿ, ಸಲಹೆಗಾರರ ನೇಮಕಕ್ಕೂ ಅವಕಾಶ ನೀಡಲಾಗಿದೆ. ಆಡಳಿತ ನಿರ್ವಹಣೆ ವೆಚ್ಚವನ್ನು ಕಂಪನಿಯ ಪಾಲುದಾರರೇ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.