ADVERTISEMENT

‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆ: ಇದೇ 26 ರಂದು ಚಾಲನೆ

ಮನೆ ಬಾಗಿಲಿಗೆ ಪಹಣಿ, ಆದಾಯ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 20:00 IST
Last Updated 6 ಜನವರಿ 2022, 20:00 IST
ಕಂದಾಯ ಸಚಿವ ಆರ್.ಅಶೋಕ
ಕಂದಾಯ ಸಚಿವ ಆರ್.ಅಶೋಕ   

ಬೆಂಗಳೂರು: ರಾಜ್ಯದ ಅಂದಾಜು 62.85 ಲಕ್ಷ ರೈತರ ಪಹಣಿ, ಅಟ್ಲಾಸ್‌ (ಹಿಸ್ಸಾ ಸ್ಕೆಚ್‌), ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಅವರವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ‘ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ’ಗೆ ಇದೇ 26ರಂದು ಸರ್ಕಾರ ಚಾಲನೆ ನೀಡಲಿದೆ.

ಈ ಯೋಜನೆಗೆ ರಾಜ್ಯಮಟ್ಟದಲ್ಲಿ ಗಣರಾಜ್ಯೋತ್ಸವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕುಮಟ್ಟದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ‘ಇ–ಆಡಳಿತ ಇಲಾಖೆಯಿಂದ ಪಹಣಿ, ಜಾತಿಮತ್ತು ಆದಾಯ ಪ್ರಮಾಣಪತ್ರವನ್ನು ಕುಟುಂಬವಾರು ಪಡೆದು ಮತ್ತು ಮೋಜಣಿ ತಂತ್ರಾಂಶದಿಂದ ಸರ್ವೆ ನಕ್ಷೆ (ಅಟ್ಲಾಸ್‌) ಮುದ್ರಿಸಿ, ಆ ದಾಖಲೆಗಳನ್ನು ಪ್ಲಾಸ್ಟಿಕ್‌ ಲಕೋಟೆಯಲ್ಲಿರಿಸಿ ಪ್ರತಿ ರೈತಕುಟುಂಬದ ಮನೆ ಬಾಗಿಲಿಗೆ ತಲುಪಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶವು ಪಹಣಿ ಮತ್ತು ಸರ್ವೆ ನಕ್ಷೆಯನ್ನು ಹಾಗೂ ಅಟಲ್‌ ಜೀ ಜನಸ್ನೇಹಿನಿರ್ದೇಶನಾಲಯವು ಜಾತಿ ಮತ್ತು ಆದಾಯ ಪ್ರಮಾಣತ್ರಗಳನ್ನು ಕುಟುಂಬವಾರು ಮುದ್ರಿಸಲು ಅನುಕೂಲವಾಗುವಂತೆ ಪಿಡಿಎಫ್‌ ನಮೂನೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಈ ಪಿಡಿಎಫ್‌ ದಾಖಲೆಯನ್ನು ಜಿಲ್ಲೆಯಲ್ಲಿ ಮುದ್ರಿಸಲು ಅನುಕೂಲ ಆಗುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಜ.15ರ ಒಳಗೆ ಕಳುಹಿಸಬೇಕು’ ಎಂದು ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳು ಪಿಡಿಎಫ್‌ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ಮುದ್ರಿಸಲು ಸಾಮರ್ಥ್ಯವಿರುವ ಮುದ್ರಣಾಲಯವನ್ನು ಜಿಲ್ಲೆಯಲ್ಲಿ ಗುರುತಿಸಬೇಕು. ಮುದ್ರಣವಾದ ದಾಖಲೆಗಳನ್ನು ಇಡಲು ಅಗತ್ಯ ಸಂಖ್ಯೆಯ ಲಕೋಟೆಯನ್ನು ಭೂಮಾಪನ ಇಲಾಖೆಯ ಆಯುಕ್ತರು ಜಿಲ್ಲೆಗಳಿಗೆ ಒದಗಿಸಬೇಕು. ದಾಖಲೆಗಳನ್ನು ಪ್ಲಾಸ್ಟಿಕ್‌ ಲಕೋಟೆಯಲ್ಲಿ ಇರಿಸಿ ಕಂದಾಯ ಅಧಿಕಾರಿಗಳು ವಿಳಂಬ ಇಲ್ಲದಂತೆ 26 ರಂದೇ ರಾಜ್ಯದಎಲ್ಲ ರೈತರ ಮನೆ ಬಾಗಿಲಿಗೆ ತಲುಪಿಸಬೇಕು. ಯೋಜನೆಗೆ ಅಗತ್ಯವಿರುವ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.