ಬೆಂಗಳೂರು: ‘ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದೇ ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯೂ ಇಲ್ಲದೇ ಮಾಡಿದ್ದೇವೆ. ನೀವು ಸಹ ಜನರ ಸೇವೆ ಮಾಡುವಾಗ ಒಂದು ರೂಪಾಯಿ ಲಂಚ ಪಡೆಯದೇ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕಂದಾಯ ಇಲಾಖೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳ ವಿತರಣೆ ಮತ್ತು 4,000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಹಿಂದೆ ಎಚ್.ಜಿ. ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಲಂಚ ಮತ್ತು ಮಧ್ಯವರ್ತಿಗಳು ಇಲ್ಲದೇ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಈಗ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ ಆರು ಲಕ್ಷ ಅರ್ಜಿಗಳು ಬಂದಿದ್ದವು. ಕೆಇಎ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆ ಆಗಿದ್ದಾರೆ. ಒಟ್ಟು 9,834 ಗ್ರಾಮ ಆಡಳಿತಾಧಿಕಾರಿಗಳಿದ್ದು, ಅದರಲ್ಲಿ 8,003 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸದಾಗಿ 1,000 ಜನ ಸೇರ್ಪಡೆಯಾಗುತ್ತಿದ್ದು, ಇನ್ನೂ 500 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು’ ಎಂದರು.
‘ಗ್ರಾಮ ಆಡಳಿತಾಧಿಕಾರಿಗಳು ಉತ್ತಮ ನಡತೆ, ಸಂಪರ್ಕವನ್ನು ಹೊಂದಿದ್ದರೆ ರೈತರು ನಿಮ್ಮ ಮಾತನ್ನು ಕೇಳುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳು ಒಳ್ಳೆಯ ರೀತಿಯ ಕೆಲಸ ಮಾಡಿಕೊಟ್ಟರೆ ಅವರ ಮೇಲೂ ಗೌರವವಿರುತ್ತದೆ. ಜನರ ಕೆಲಸ ದೇವರ ಕೆಲಸ ಎಂಬುದುದನ್ನು ನೆನಪಿಟ್ಟುಕೊಳ್ಳಬೇಕು’ ಎಂದೂ ಹೇಳಿದರು.
‘ಹಿಂದೆ ಗ್ರಾಮಗಳಲ್ಲಿ ಶಾನುಭೋಗರು ಜಮೀನಿನ ವಿವರಗಳನ್ನು ಬರೆಯುತ್ತಿದ್ದರು. ಶಾನುಭೋಗರು ಎಂದರೆ ರೈತರಿಗೆ ಗುರುಗಳಿದ್ದಂತೆ. ಶಾನುಭೋಗರು ಹೇಳಿದ್ದೇ ಅಂತಿಮ ಎಂಬಂತಿತ್ತು. ಅವರಲ್ಲಿ ಕೆಲವರು ಉತ್ತಮ ಕೆಲಸ ಮಾಡುತ್ತಿದ್ದರೆ, ಕೆಲವರು ಕಿತಾಪತಿ ಮಾಡುತ್ತಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ರಾಜ್ಯದ ಇತಿಹಾಸದಲ್ಲಿ ಏಕಕಾಲಕ್ಕೆ ಸಾವಿರ ಜನರ ನೇಮಕ ಇದೇ ಮೊದಲು ನಡೆದಿದೆ. ಈ ಹಿಂದೆ, ಪಿಯು ಅಂಕದ ಆಧಾರದಲ್ಲಿ ಆಯಾ ಜಿಲ್ಲೆಗಳಿಗೆ ಸೀಮಿತವಾಗಿ ನೇಮಕಾತಿ ಆಗುತ್ತಿತ್ತು. ಆದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಜಿಲ್ಲೆಗಳಲ್ಲಿ ಪಾರದರ್ಶಕತೆ ಇಲ್ಲ ಎಂಬ ದೂರು ಇತ್ತು. ನಮ್ಮ ಸರ್ಕಾರ ಬಂದ ಮೇಲೆ ಇಡೀ ರಾಜ್ಯದಲ್ಲಿ ಒಂದೇ ಬಾರಿಗೆ ಎಲ್ಲ ಜಿಲ್ಲೆಯವರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಪಾರದರ್ಶಕವಾಗಿ ನೇಮಕ ಆರಂಭಿಸಲಾಯಿತು’ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳು ತಾಲ್ಲೂಕು ಕಚೇರಿಗಳಿಗೆ ಹೋಗಿ ಟಪಾಲು ಕೊಡುವುದು ಮತ್ತು ತೆಗೆದುಕೊಳ್ಳುವುದು ಕಷ್ಟದ ಕೆಲಸ. ಇದರಿಂದ ಓಡಾಟಕ್ಕೇ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಕೆಲಸ ಹೊರೆ ತಗ್ಗಿಸಲು 4,000 ಲ್ಯಾಪ್‌ಟಾಪ್ ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್, ಕಂದಾಯ ಆಯುಕ್ತ ಸುನಿಲ್‌ಕುಮಾರ್ ಇದ್ದರು.
‘ನನ್ನ ಶಿಫಾರಸೂ ನಡೆಯಲ್ಲ’
‘ಗ್ರಾಮ ಆಡಳಿತ ಅಧಿಕಾರಿ ಕೆಲಸಕ್ಕೆ ಶಿಫಾರಸು ಮಾಡುವಂತೆ ಏಳೆಂಟು ಜನ ನನ್ನ ಬಳಿಯೂ ಬಂದಿದ್ದರು. ಆದರೆ ನಾನೇ ಮನಸ್ಸು ಮಾಡಿದರೂ ಶಿಫಾರಸು ಮಾಡಲು ಸಾಧ್ಯವಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ‘ಉತ್ತರ ಪತ್ರಿಕೆಗಳನ್ನು ತಿದ್ದುವುದು ಸೇರಿ ಯಾವ ಅಕ್ರಮ ಚಟುವಟಿಕೆಗಳಿಗೂ ಆಸ್ಪದ ಇಲ್ಲದಂತೆ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ಕೆಲಸ ಗಿಟ್ಟಿಸಿದವರು ಹುದ್ದೆಗಾಗಿ ಒಂದು ಪೈಸೆ ಯಾರಿಗಾದರೂ ಲಂಚ ಕೊಟ್ಟಿದ್ದೀರಾ ಹೇಳಿ ಇದೇ ಕಾರಣಕ್ಕೆ ಈ ಬಗ್ಗೆ ಈವರೆಗೆ ಒಂದೂ ತಕರಾರು ಬಂದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.