ADVERTISEMENT

ಹೈಕೋರ್ಟ್‌ ಆದೇಶದಂತೆ ಪರಿಷ್ಕೃತ ವೇಳಾಪಟ್ಟಿ: ಮಾ. 27ರಿಂದ 5, 8ನೇ ತರಗತಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 23:47 IST
Last Updated 16 ಮಾರ್ಚ್ 2023, 23:47 IST
   

ಬೆಂಗಳೂರು: ಐದು ಮತ್ತು ಎಂಟನೇ ತರಗತಿ ಪರೀಕ್ಷೆಗಳು (ಮೌಲ್ಯಾಂಕನ) ಮಾರ್ಚ್‌ 27ರಿಂದ ಏಪ್ರಿಲ್‌ 1ರವರೆಗೆ ನಡೆಯಲಿವೆ.

ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶದಂತೆ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಗುರುವಾರ ಪ್ರಕಟಿಸಿದೆ.

ಐದನೇ ತರಗತಿಗೆ ಮಾರ್ಚ್‌ 27ರಿಂದ 30ರವರೆಗೆ ನಾಲ್ಕು ದಿನಗಳು, ಎಂಟನೇ ತರಗತಿಗೆ ಮಾರ್ಚ್‌ 27ರಿಂದ ಏಪ್ರಿಲ್‌ 1ರವರೆಗೆ 6 ದಿನಗಳು ಪರೀಕ್ಷೆಗಳು ನಡೆಯಲಿವೆ. ಮಾರ್ಚ್‌ 30ರ ಗಣಿತ ಪರೀಕ್ಷೆ ಬೆಳಿಗ್ಗೆ 10.30ರಿಂದ 12.30ರವರೆಗೆ, ಉಳಿದ ಎಲ್ಲ ವಿಷಯಗಳ ಪರೀಕ್ಷೆ ಪ್ರತಿದಿನ ಮಧ್ಯಾಹ್ನ 2.30ರಿಂದ 4.30ರವರೆಗೆ ಪ್ರಸ್ತುತ ಮಕ್ಕಳು ಓದುತ್ತಿರುವ ಆಯಾ ಶಾಲೆ ಗಳಲ್ಲೇ ನಡೆಯುತ್ತವೆ.

ADVERTISEMENT

ಎಂಟನೇ ತರಗತಿಗೆ 27ರಂದು ಪ್ರಥಮ ಭಾಷೆ, 28ರಂದು ದ್ವಿತೀಯ ಭಾಷೆ, 29ರಂದು ತೃತೀಯ ಭಾಷಾ ವಿಷಯಗಳು, 30ರಂದು ಗಣಿತ, 31ರಂದು ವಿಜ್ಞಾನ ಹಾಗೂ ಏ.1ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯುತ್ತವೆ.

ಐದನೇ ತರಗತಿಗೆ 27ರಂದು ಪ್ರಥಮ ಭಾಷೆ, 28ರಂದು ದ್ವಿತೀಯ ಭಾಷೆ, 29ರಂದು ಪರಿಸರ ಅಧ್ಯಯನ, 30ರಂದು ಗಣಿತ ಪರೀಕ್ಷೆಗಳು ನಡೆಯುತ್ತವೆ.

ಪ್ರತಿ ಪತ್ರಿಕೆಯು ತಲಾ 40 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಂದು ಅಂಕದ 20 ಬಹು ಆಯ್ಕೆಯ ಪ್ರಶ್ನೆಗಳು, 20 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ಪ್ರಶ್ನೆಗಳಿರುತ್ತವೆ. ಅವುಗಳಲ್ಲಿ ಎರಡು ಅಂಕದ ಐದು ಪ್ರಶ್ನೆಗಳು, ಮೂರು ಅಂಕದ ಎರಡು ಪ್ರಶ್ನೆಗಳು, ನಾಲ್ಕು ಅಂಕದ ಒಂದು ಪ್ರಶ್ನೆಯನ್ನು ಪತ್ರಿಕೆಗಳು ಒಳಗೊಂಡಿರುತ್ತವೆ. ಉತ್ತರಿಸಲು ಎರಡು ಗಂಟೆ ಸಮಯ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.