ADVERTISEMENT

ಬಾಣಂತಿಯರಿಗೆ ಕರಿಗಜಿವಿಲಿ, ದಿನಬಳಕೆಗೆ ರಾಜಮುಡಿ

ಮೈಸೂರಿನಲ್ಲಿ 250ಕ್ಕೂ ಅಧಿಕ ಭತ್ತದ ತಳಿ, ದೇಸಿ ಅಕ್ಕಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 16:45 IST
Last Updated 9 ಫೆಬ್ರುವರಿ 2019, 16:45 IST
ಮೈಸೂರಿನಲ್ಲಿ ನಡೆಯುತ್ತಿರುವ ಮೇಳದಲ್ಲಿ ದೇಸಿ ಅಕ್ಕಿ ಕುರಿತು ಮಾಹಿತಿ ಪಡೆದ ಮಹಿಳೆಯರು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ನಡೆಯುತ್ತಿರುವ ಮೇಳದಲ್ಲಿ ದೇಸಿ ಅಕ್ಕಿ ಕುರಿತು ಮಾಹಿತಿ ಪಡೆದ ಮಹಿಳೆಯರು –ಪ್ರಜಾವಾಣಿ ಚಿತ್ರ   

ಮೈಸೂರು: ಬಾಣಂತಿಯರಿಗೆ ಯೋಗ್ಯವಾದ ಕರಿಗಜಿವಿಲಿ, ದಿನಬಳಕೆಗೆ ರಾಜಮುಡಿ, ನಿಶ್ಯಕ್ತಿ ನಿವಾರಣೆಗೆ ಕೇರಳದ ನವರಾ, ರುಚಿಯಾದ ಅಡುಗೆಗೆ ಕೊರಲೆ, ಸಕ್ಕರೆ ಕಾಯಿಲೆ ಉಳ್ಳವರಿಗೆ ಕೆಂಪಕ್ಕಿ, ಪಾಯಸಕ್ಕೆ ಬರ್ಮಾ ಕಪ್ಪು ಅಕ್ಕಿ, ಘಂ ಎನ್ನುವ ಗಂಧಸಾಲೆ...

–ಸಾಂಸ್ಕೃತಿಕ ನಗರಿಯಲ್ಲಿ ಒಂದೇ ಸೂರಿನಡಿ ಲಭ್ಯವಿರುವ ಔಷಧೀಯ ಗುಣವುಳ್ಳ ತರಹೇವಾರಿ ಅಕ್ಕಿ, ಭತ್ತದ ತಳಿಗಳು ಇವು.

ಕೃಷಿ ಬೆಲೆ ಆಯೋಗ, ಸಹಜ ಸಮೃದ್ಧ, ಭತ್ತದ ತಳಿ ಉಳಿಸಿ ಆಂದೋಲನ, ಸಾವಯವ ಸಂಘಗಳ ಒಕ್ಕೂಟ ಎರಡು ದಿನಗಳ ‘ದೇಸಿ ಅಕ್ಕಿ ಮೇಳ’ ಆಯೋಜಿಸಿವೆ. ಭತ್ತ ಬೆಳೆಯುವ 12 ಜಿಲ್ಲೆಗಳಿಂದ ಭತ್ತ ಸಂರಕ್ಷಕರು, ಸಾವಯವ ಕೃಷಿಕರು, ಮಹಿಳಾ ಗುಂಪುಗಳ ಸದಸ್ಯರು, ಭತ್ತ ಬೆಳೆಗಾರರು ಸೇರಿದಂತೆ ಸುಮಾರು 300 ಮಂದಿ ಭಾಗವಹಿಸಿದ್ದಾರೆ. ಪ್ರದರ್ಶನದ ಜೊತೆಗೆ ಮಾರಾಟವೂ ಉಂಟು.

ADVERTISEMENT

ಬಗೆ ಬಗೆಯ ಕೆಂಪಕ್ಕಿ ಸೇರಿದಂತೆ ಸುಮಾರು 250 ಭತ್ತದ ತಳಿ, ದೇಸಿ ಅಕ್ಕಿ ಕಾಣಬಹುದು. ಸೇಲಂ ಸಣ್ಣಕ್ಕಿ, ರತ್ನಚೂಡಿ, ನವಿಲು ಸಾಲೆ, ಕರಿಜಡ್ಡು, ಆಲೂರು ಸಣ್ಣಕ್ಕಿ, ಸಣ್ಣವಾಳ್ಯ ಪಾಲೀಶ್‌, ಕೊಯಮತ್ತೂರು ಸಣ್ಣ, ಬಂಗಾರ ಕಡ್ಡಿ, ಕರಿಗಜವಳಿ, ಮೈಸೂರು ಸಣ್ಣ, ಜೀರಿಗೆ ಸಣ್ಣ, ಬಿದಿರಕ್ಕಿ ಇಲ್ಲಿವೆ.

ಭತ್ತದ ತೋರಣ, ಕುಚ್ಚು, ಹ್ಯಾಂಗಿಂಗ್ಸ್‌, ಭತ್ತದ ಆಭರಣ, ದೇಸಿ ಅಕ್ಕಿಯ ಕ್ಯಾಲೆಂಡರ್‌, ವಿವಿಧ ಬಗೆಯ ಭತ್ತದ ತಳಿಗಳ ಬೀಜ, ತೆನೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮೊಳಕೆಯೊಡೆಯುವ ಮೊಳಕೆ ಅಕ್ಕಿ ಕಣ್ಣು ಕುಕ್ಕುತ್ತಿದೆ.

ಮೈಸೂರು ಸಂಸ್ಥಾನದ ಅರಸರ ಮನಗೆದ್ದಿದ್ದ ರಾಜಮುಡಿ ಭತ್ತದ ತಳಿಗೆ ಭೌಗೋಳಿಕ ಸೂಚ್ಯಂಕ ಹಕ್ಕು ಪಡೆಯುವ ಪ್ರಯತ್ನವನ್ನು ವಿವಿಧ ಸಂಘ ಸಂಸ್ಥೆಗಳು ನಡೆಸುತ್ತಿವೆ.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಚಾಲನೆ ನೀಡಿದರು. ‘ಕೃಷಿ ಬೆಲೆ ಆಯೋಗ ಸಲ್ಲಿಸಿದ್ದ ವರದಿಯಲ್ಲಿನ ಐದು ಶಿಫಾರಸುಗಳಿಗೆ ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಸ್ಪಂದಿಸಿದೆ. ಮಳೆ ಆಶ್ರಿತ ಭತ್ತ ಬೆಳೆಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ಆಶ್ರಿತ ಭತ್ತವನ್ನು ಸಿರಿಧಾನ್ಯವಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಬೆಳೆಗಳಿಗೆ ಗುಣಮಟ್ಟ ಆಧಾರಿತ ಬೆಂಬಲ ಬೆಲೆ ನೀಡಬೇಕು. ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.