ADVERTISEMENT

ಮುತ್ತಪ್ಪ ರೈಗೆ ಹೊಡೆದವರ ಜೊತೆಗೂಡಿ ನನಗೂ ಹೊಡೆಯಲು ಯತ್ನ: ರಾಕೇಶ್ ಮಲ್ಲಿ

ರಿಕ್ಕಿ ರೈ ಮೇಲಿನ ಗುಂಡಿನ ದಾಳಿ: ಮೊದಲ ಆರೋಪಿ ರಾಕೇಶ್ ಮಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 14:35 IST
Last Updated 22 ಏಪ್ರಿಲ್ 2025, 14:35 IST
<div class="paragraphs"><p>ರಾಕೇಶ್ ಮಲ್ಲಿ</p></div>

ರಾಕೇಶ್ ಮಲ್ಲಿ

   

ರಾಮನಗರ: ‘ಮುತ್ತಪ್ಪ ರೈ ತಮಗೆ ಯಾರು ಹೊಡೆದಿದ್ದರೊ, ಅವರೊಂದಿಗೆ ಸೇರಿ ನನಗೆ ಹೊಡೆಯಲು ಪ್ರಯತ್ನಿಸಿದ್ದರು. ಈಗ ಅವರಿಲ್ಲ. ಆದರೆ, ಅವರ ಮಕ್ಕಳು ಅದೇ ಕೆಲಸ ಮಾಡುತ್ತಿದ್ದಾರೆ. ಮುಂದೇನಾಗುತ್ತದೆ ಎಂದು ನೋಡೋಣ...’

– ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಾಲ್ಲೂಕಿನ ಬಿಡದಿ ಬಳಿ ನಡೆದ ಗುಂಡಿನ ದಾಳಿ ಪ್ರಕರಣದ ಮೊದಲ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ, ಬಿಡದಿ ಠಾಣೆಯಲ್ಲಿ ಮಂಗಳವಾರ ಸತತ 6 ತಾಸು ಪೊಲೀಸ್ ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ಇದು.

ADVERTISEMENT

‘ಕಳೆದ 22 ವರ್ಷಗಳಿಂದ ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಮುತ್ತಪ್ಪ ರೈ ಇರುವಾಗಲೇ ನನ್ನ ಮತ್ತು ಅವರ ನಡುವೆ ಕಡೆ ಗಳಿಗೆಯಲ್ಲಿ ವೈಮನಸ್ಸು ಉಂಟಾಗಿ, ಸಂಬಂಧದಲ್ಲಿ ಬಿರುಕಾಗಿತ್ತು. ನನ್ನ ಪಾಡಿಗೆ ಕುಟುಂಬದೊಂದಿಗೆ ಇದ್ದೇನೆ. ಹೀಗಿರುವಾಗ, ಕೇಸ್ ಹಾಕಿರುವುದು ಆಶ್ಚರ್ಯ ತಂದಿದೆ’ ಎಂದು ಹೇಳಿದರು.

ಒಂದಿಂಚೂ ಜಾಗ ಕೊಟ್ಟಿಲ್ಲ: ‘ಸಾಯುವುದಕ್ಕೆ ಮುಂಚೆ ತಮ್ಮ ಜೊತೆಗಿದ್ದವರಿಗೆ ಹಾಗೂ ಕೆಲಸಗಾರರಿಗೆ ಮುತ್ತಪ್ಪ ರೈ ಅವರು ಒಂದಿಂಚು ಭೂಮಿಯನ್ನೂ ಕೊಟ್ಟಿಲ್ಲ. ಆದರೆ, ರೈ ಅವರು ನಿವೇಶನ ಸೇರಿದಂತೆ ಏನೇನೊ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದು ತಪ್ಪು. ಹಾಗೇನಾದರೂ ಭೂಮಿ ಕೊಟ್ಟಿದ್ದರೆ ಸ್ಥಳೀಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹೋಗಿ ಪರಿಶೀಲಿಸಿ ನೋಡಿ. ಆಗ ಸತ್ಯ ಗೊತ್ತಾಗಲಿದೆ’ ಎಂದು ಕಿಡಿಕಾರಿದರು.

‘ರೈ ವಿರುದ್ಧದ ಪ್ರಕರಣಗಳು ಮುಗಿದ ಬಳಿಕ ಕೊಡುವುದಾಗಿ ಹೇಳಿದ್ದಿದ್ದರೆ, ಇದೀಗ ಅವರು ತೀರಿ ಹೋಗಿಯೇ ನಾಲ್ಕು ವರ್ಷವಾಯಿತು. ಆದರೂ, ಯಾಕೆ ಕೊಟ್ಟಿಲ್ಲ. ಅವರಿಗಾಗಿ ತುಂಬಾ ಮಂದಿ ಕೆಲಸ ಮಾಡಿದವರಿದ್ದಾರೆ. ಅಂತಹ ಪಾಪದವರಿಗೆ ಕೊಡಲಿ. ಅವರಿಗೂ ಒಳ್ಳೆಯದಾಗಬೇಕಲ್ಲವೆ? ರಿಕ್ಕಿ ರೈ ಪ್ರಕರಣದಲ್ಲಿ ಪೊಲೀಸರ ನೋಟಿಸ್ ಮೇರೆಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ವಿಚಾರಣೆ ಮುಗಿಯಲಿ. ಮುಂದೆ ನಾನೇ ಸುದ್ದಿಗೋಷ್ಠಿ ಕರೆದು ಮಾತನಾಡುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.