ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ದೇಶವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ‘ಕೇಬಲ್ ಕಾರ್’ (ರೋಪ್‌ವೇ) ಸೇವೆ ಆರಂಭಿಸುವ ಪ್ರವಾಸೋದ್ಯಮ ಇಲಾಖೆಯ ಯೋಜನೆಗೆ ಕರ್ನಾಟಕ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ.
ರೋಪ್‌ವೇ ನಿರ್ಮಾಣಕ್ಕೆ ನಂದಿ ಗ್ರಾಮದ ಸರ್ವೆ ಸಂಖ್ಯೆ 1ರ 0.86 ಹೆಕ್ಟೇರ್ ಅರಣ್ಯ ಬಳಕೆಗೆ ಪ್ರವಾಸೋದ್ಯಮ ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ‘ಈ ಅರಣ್ಯವು ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮಕ್ಕೆ ಸೇರಿದ್ದಲ್ಲ. ಯೋಜನೆಗೆ ಒಪ್ಪಿಗೆ ನೀಡಬಹುದು’ ಎಂದು ಚಿಕ್ಕಬಳ್ಳಾಪುರ ಡಿಸಿಎಫ್ ವರದಿ ಸಲ್ಲಿಸಿದ್ದರು. ಯೋಜನೆಗೆ ಅನುಮೋದನೆ ನೀಡುವಂತೆ ಕೋರಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಮೇ 19ರಂದು ಶಿಫಾರಸು ಮಾಡಿದ್ದಾರೆ.
ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಸಂಬಂಧ ಚಿತ್ರನಟ ಶಂಕರ್‌ನಾಗ್ ಅವರು 80ರ ದಶಕದಲ್ಲಿ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದರು. ಅವರ ನಿಧನದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. 2015–16ರ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಲಾಗಿತ್ತು. ಬಳಿಕ, ಬೆಟ್ಟಕ್ಕೆ ‘ಕೇಬಲ್ ಕಾರ್’ ಸೇವೆ ಆರಂಭಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿತ್ತು.
ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಮೌಲ್ಯಮಾಪನ ನಡೆಸಲು ಇಲಾಖೆ ಟೆಂಡರ್ ಆಹ್ವಾನಿಸಿ, ಮರು ಚಾಲನೆ ನೀಡಿತ್ತು. 2017ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಟೆಂಡರ್ ಕರೆದಾಗ ಒಂದು ಸಂಸ್ಥೆ ಮಾತ್ರ ಭಾಗವಹಿಸಿತ್ತು. ತಾಂತ್ರಿಕ ಬಿಡ್‌ನಲ್ಲಿ ತೇರ್ಗಡೆ ಆಗದ ಕಾರಣ ಟೆಂಡರ್ ತಿರಸ್ಕರಿಸಲಾಗಿತ್ತು. ಎರಡನೇ ಬಾರಿ ಟೆಂಡರ್ ಕರೆದಾಗಲೂ ಅದೇ ಸಮಸ್ಯೆ ಮರುಕಳಿಸಿತ್ತು. ಮೂರನೇ ಟೆಂಡರ್ ಸಹ ಫಲಪ್ರದವಾಗಿರಲಿಲ್ಲ. ಅರಣ್ಯ ಭೂಮಿ ನೀಡಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು.
ಆ ಬಳಿಕ, ರೋಪ್ ವೇ ಅಳವಡಿಸಲು ಸರ್ಕಾರ ತೀರ್ಮಾನಿಸಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಮೂರು ಕಿ.ಮೀ ಉದ್ದದ ರೋಪ್ ವೇಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಗೆ ₹93.40 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ ಈ ವೆಚ್ಚ ₹115 ಕೋಟಿ ಆಗಲಿದೆ.
18 ತಿಂಗಳ ಅವಧಿಯಲ್ಲಿ ರೋಪ್ ವೇ ನಿರ್ಮಾಣವಾಗಲಿದೆ. ಬಂಡವಾಳ ಹೂಡುವ ರೋಪ್ ವೇ ನಿರ್ಮಾಣ ಸಂಸ್ಥೆಗೆ 30 ವರ್ಷ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಪ್ರತಿ ಕಾರ್‌ನಲ್ಲಿ ಆರು ಜನ ಕುಳಿತುಕೊಳ್ಳಲು ಅವಕಾಶವಿರುತ್ತದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ರೋಪ್‌ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ಕುಡಿಯುವ ನೀರಿನ ಘಟಕ, ಶೌಚಾಲಯ, ಟಿಕೆಟ್ ಕೌಂಟರ್, ವಿಶ್ರಾಂತಿ ಕೊಠಡಿ, ಮಳಿಗೆಗಳು ಇರುತ್ತವೆ’ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ತಿಳಿಸಿದರು.
ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ. ರೋಪ್ ವೇ ನಿರ್ಮಿಸಲು ಸುಮಾರು 150 ಅಡಿ ಪ್ರದೇಶದಲ್ಲಿ ಬಂಡೆ ಕೊರೆಯುವುದರಿಂದ ನಂದಿ ಬೆಟ್ಟ ಬಿರುಕು ಬಿಡುವ ಅಪಾಯ ಇದೆ. ಜನ ಪ್ರತಿನಿಧಿಗಳಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲ.ಎ.ಎನ್. ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.