ADVERTISEMENT

ಶಾಲಾ ಕೊಠಡಿ ನಿರ್ಮಾಣಕ್ಕೆ ₹ 50 ಲಕ್ಷ ಕೊಡುಗೆ

ತಂದೆಯ ಕನಸು ಈಡೇರಿಸಿದ ಮಗ, ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ

ಪ್ರಜಾವಾಣಿ ವಿಶೇಷ
Published 25 ಫೆಬ್ರುವರಿ 2023, 22:15 IST
Last Updated 25 ಫೆಬ್ರುವರಿ 2023, 22:15 IST
ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣಕ್ಕೆ ₹ 50 ಲಕ್ಷ ನೀಡುವ ಒಡಂಬಡಿಕೆ ಪತ್ರವನ್ನು ದಿ.ಪುಟ್ಟೇಗೌಡರ ಪತ್ನಿ ಜಯಮ್ಮ ಅವರಿಗೆ ಡಿಡಿಪಿಐ ಜವರೇಗೌಡ ನೀಡಿದರು
ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣಕ್ಕೆ ₹ 50 ಲಕ್ಷ ನೀಡುವ ಒಡಂಬಡಿಕೆ ಪತ್ರವನ್ನು ದಿ.ಪುಟ್ಟೇಗೌಡರ ಪತ್ನಿ ಜಯಮ್ಮ ಅವರಿಗೆ ಡಿಡಿಪಿಐ ಜವರೇಗೌಡ ನೀಡಿದರು   

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ದಿವಂಗತ ಪುಟ್ಟೇಗೌಡರ ಮಗ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕೆ.ಪಿ.ಶಿವಕುಮಾರ್ ಅವರು ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹ 50 ಲಕ್ಷ ವೆಚ್ಚದಲ್ಲಿ ಎರಡು ಅಂತಸ್ತಿನ 6 ಕೊಠಡಿ ನಿರ್ಮಿಸಿಕೊಡಲು ಮುಂದಾಗಿದ್ದಾರೆ.

ತಂದೆಯ ಕನಸು ನನಸು ಮಾಡುತ್ತಿರುವ ಅವರು, ತಾಯಿ ಜಯಮ್ಮ ಜೊತೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜವರೇಗೌಡ, ಬಿಇಒ ಸೀತಾರಾಮು ಅವರೊಂದಿಗೆ ಶುಕ್ರವಾರ ಒಡಂಬಡಿಕೆ ಮಾಡಿಕೊಂಡರು.

ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ 60 ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿ, ಯುಕೆಜಿ ತರಗತಿಗಳೂ ನಡೆಯುತ್ತಿವೆ. ಹಲವು ದಿನಗಳಿಂದ ಮಕ್ಕಳಿಗೆ ಕೊಠಡಿ ಕೊರತೆ ಇದೆ. ಈಗಿನ ಕಟ್ಟಡದಲ್ಲಿ ಮೂರು ಕೊಠಡಿಗಳು ಶಿಥಿಲವಾಗಿದ್ದು, ಮಳೆಗಾಲದಲ್ಲಿ ನೀರು ನಿಂತು ಗೋಡೆ ಬಿರುಕು ಬಿಟ್ಟಿವೆ.

ADVERTISEMENT

ಕಟ್ಟಡಗಳನ್ನು ವೀಕ್ಷಿಸಿದ ಶಿವಕುಮಾರ್, ‘ದುರಸ್ತಿ ಮಾಡಿದರೆ ಪ್ರಯೋಜನವಾಗುವುದಿಲ್ಲ; ಹೊಸದಾಗಿ ಕೊಠಡಿ ನಿರ್ಮಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದ್ದರು. ಅದು ಈಗ ಸಾಕಾರಗೊಳ್ಳುತ್ತಿದ್ದು ಗ್ರಾಮಸ್ಥರು, ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ತಂದೆ ಹುಟ್ಟೂರಿನ ಶಾಲೆಯನ್ನು ಅಭಿವೃದ್ಧಿಪಡಿಸುವ ಕನಸು ಕಂಡಿದ್ದರು. ಅವರ ಕನಸು ನನಸು ಮಾಡುವುದು ನನ್ನ ಜವಾಬ್ದಾರಿ. 6 ಕೊಠಡಿಗಳ ನಿರ್ಮಾಣಕ್ಕೆ ₹ 50 ಲಕ್ಷ ವೆಚ್ಚ ತಗಲುತ್ತದೆ. ಅಷ್ಟೂ ಹಣವನ್ನು ಭರಿಸಲು ಒಪ್ಪಿ ಒಡಂಬಡಿಕೆಗೆ ಸಹಿ ಮಾಡಿದ್ದೇವೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಟುಂಬವೊಂದು ₹ 50 ಲಕ್ಷ ನೀಡಿ 6 ಕೊಠಡಿ ನಿರ್ಮಿಸಿಕೊಡುತ್ತಿದೆ. ಸಮಾಜಕ್ಕೆ ಇದು ಸ್ಫೂರ್ತಿಯಾಗಲಿ’ ಎಂದು ಡಿಡಿಪಿಐ ಜವರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.