ADVERTISEMENT

ಕಾಶಿ ಯಾತ್ರಿಕರಿಗೆ ₹5 ಸಾವಿರ: ಸಿಎಂ | ಸಹಾಯಧನ ಪಡೆಯುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 5:00 IST
Last Updated 15 ಜುಲೈ 2022, 5:00 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಕಾಶಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ, ಅಲ್ಲಿಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ ₹5 ಸಾವಿರ ಸಹಾಯಧನ ಯೋಜನೆ ಆರಂಭಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಜರಾಯಿ ಇಲಾಖೆ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ, ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ, ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಮತ್ತು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೆಬ್‌ ಪೋರ್ಟಲ್‌ ಲೋಕಾರ್ಪಣೆ ಮಾಡಿ, ‘ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕಾಶಿಯನ್ನು ಅಭಿವೃದ್ಧಿಪಡಿಸಿದ್ದಾರೆ. 23 ಘಾಟ್‌ಗಳನ್ನು ಸ್ವಚ್ಚಗೊಳಿಸಿ ಬದಲಾವಣೆ ಮಾಡಲಾಗಿದೆ. ದೇವಸ್ಥಾನದ ಆವರಣ ವನ್ನೂ ಸ್ವಚ್ಛಗೊಳಿಸಿ, ಭಕ್ತಿ– ಭಾವ ಮೂಡುವಂತೆ ಮಾಡಿದ್ದಾರೆ. ರಾಜ್ಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳಲಿ ಎಂಬ ಉದ್ದೇಶದಿಂದ ಆರಂಭಿಸಿದ ಸಹಾಯಧನ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಹೋದಾಗ ಅಲ್ಲಿನ ಕರ್ನಾಟಕ ಛತ್ರದಲ್ಲಿ ನೋಂದಣಿ ಯಾಗಿ, ದಾಖಲಾತಿಗಳನ್ನು ವೆಬ್‌ ಪೋರ್ಟ್‌ಲ್‌ಗೆ ಸಲ್ಲಿಸಿ, ಸಹಾಯಧನ ಪಡೆಯಬಹುದು’ ಎಂದರು.

ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ‘ಇಲಾಖೆಗೆ ಮುಖ್ಯಮಂತ್ರಿ‌ ಈ ವರ್ಷ ಅತಿಹೆಚ್ಚು ಅನುದಾನ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 693 ಕೋಟಿ ಅನುದಾನ ಕೊಟ್ಟಿದ್ದಾರೆ. ಕಾಶಿ ಯಾತ್ರಾರ್ಥಿಗಳಿಗೆ ಪ್ರೋತ್ಸಾಹಧನ ನೀಡಬೇಕು ಎನ್ನುವುದು ನನ್ನ ಆಶಯವಾಗಿತ್ತು. ಅದಕ್ಕೆ ಸ್ಪಂದಿಸಿದ್ದಾರೆ’ ಎಂದರು.

ADVERTISEMENT

ಕಾಶಿ ಯಾತ್ರೆಗೆ ತೆರಳಿದ್ದ 10 ಜನರಿಗೆ ಸಾಂಕೇತಿಕವಾಗಿ ಮುಖ್ಯಮಂತ್ರಿ ಸಹಾ ಯಧನ ವಿತರಿಸಿದರು. ಜಲ ಸಂಪನ್ಮೂಲ ಸಚಿವ‌ ಗೋವಿಂದ ಕಾರಜೋಳ ಇದ್ದರು.

ಸಹಾಯಧನ ಪಡೆಯುವುದು ಹೇಗೆ?

‘ಇದೇ ಏಪ್ರಿಲ್‌ 1ರಿಂದ ಜುಲೈ 20ರವರೆಗೆ ಕಾಶಿ ಯಾತ್ರೆ ಕೈಗೊಂಡಿರುವ ಜನರು ಆಫ್‌ಲೈನ್‌ ಅರ್ಜಿಗಳನ್ನು ಮುಜರಾಯಿ ಆಯುಕ್ತರ ಕಚೇರಿಗೆ ಸಲ್ಲಿಸಿ ಸಹಾಯಧನ ಪಡೆಯಬಹುದು. ಆಫ್‌ಲೈನ್‌ನಲ್ಲಿ500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಮುಂದೆ ಸರ್ಕಾರದ ಮಾರ್ಗಸೂಚಿಯ ಅನ್ವಯ ಸಂಬಂಧಿಸಿದ ದಾಖಲಾತಿಗಳನ್ನು ಇಲಾಖೆಯ ವೆಬ್‌ಸೈಟ್‌ https://itms.kar.nic.in/ ಮತ್ತು ಸೇವಾ ಸಿಂಧು ವೆಬ್‌ ಪೊರ್ಟಲ್‌ನಲ್ಲಿ (https://sevasindhu.karnataka.gov.in/) ಅಪ್‌ಲೋಡ್‌ ಮಾಡಬೇಕು. ದಾಖಲೆಗಳನ್ನು ಪರಿಶೀಲಿಸಿ, ಅರ್ಜಿದಾರರ ಆಧಾರ್‌ ಲಿಂಕ್‌ ಹೊಂದಿರುವ ಬ್ಯಾಂಕ್‌ ಖಾತೆಗೆ ‌ನೇರವಾಗಿ (ಡಿಬಿಟಿ)ಸಹಾಯಧನ ಜಮೆ ಮಾಡಲಾಗುವುದು’ ಎಂದು ಜೊಲ್ಲೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.